ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಕೊಂದಿದ್ದಾಗಿ ಆರೋಪಿ ಪರಶುರಾಮ್ ವಾಗ್ಮೋರೆ ಎಸ್ಐಟಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿಜಯಪುರದ ಸಿಂದಗಿಯಲ್ಲಿ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ(26)ಯನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ಆತನನ್ನು ವಿಚಾರಣೆಗಾಗಿ ನ್ಯಾಯಾಲಯ 14 ದಿನಗಳ ಬಂಧನಕ್ಕೆ ನೀಡಿತ್ತು.
ಇದೀಗ ಈತನನ್ನು ವಿಚಾರಣೆಗೊಳಪಡಿಸಿದಾಗ ತಾನೇ ಗುಂಡಿಕ್ಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. 'ಶೂಟ್ ಮಾಡಿದ್ದು ನಾನೇ, ಆದರೆ ಶೂಟ್ ಮಾಡಿದ ನಂತರ ನನ್ನ ಕೈಯಿಂದ ಬೇರೊಬ್ಬರು ಗನ್ ಪಡೆದುಕೊಂಡರು. ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ' ಎನ್ನಲಾಗಿದೆ.
2017ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ (55) ಅವರ ಮೇಲೆ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಬಳಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ಗೆ ಆದೇಶಿಸಿತ್ತು. ಅದರಂತೆ ಕಳೆದ 9 ತಿಂಗಳಿನಿಂದ ತನಿಖೆ ನಡೆಸುತ್ತಿದ್ದ ಪೊಲೀಸರು ಕಡೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.