ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿದ್ದ ಸಚಿವ ಸಂಪುಟದ ಕಗ್ಗಂಟು ಕಡೆಗೂ ಬಗೆಹರಿದಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಗುರುವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಕಳೆದ ಎರಡು ಮೂರು ದಿನಗಳಿಂದ ನವದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ನೆನ್ನೆಯಷ್ಟೇ ಬೆಂಗಳೂರಿಗೆ ವಾಪಸಾಗಿರುವ ಕಾಂಗ್ರೆಸ್- ಜೆಡಿಎಸ್ ನಾಯಕರ ನಡುವೆ ಕಡೆಗೂ ಒಮ್ಮತ ಮೂಡಿದೆ. ಕಾಂಗ್ರೆಸ್ ನಾಯಕರು ಹಣಕಾಸು ಖಾತೆಗಾಗಿ ಪಟ್ಟು ಹಿಡಿದಿದ್ದರೆ, ಜೆಡಿಎಸ್ ಹಣಕಾಸು, ಇಂಧನ, ಜಲಸಂಪನ್ಮೂಲ, ಲೋಕೋಪಯೋಗಿ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದರು. ಕಡೆಗೆ ಹಣಕಾಸು ಖಾತೆಯನ್ನು ಜೆಡಿಎಸ್ ಗೆ ನೀಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಅದೇರೀತಿ ಜಲಸಂಪನ್ಮೂಲ ಹಾಗೂ ಇಂಧನ ಖಾತೆಗಳನ್ನು ಬಿಟ್ಟುಕೊಡಲು ಜೆಡಿಎಸ್ ಸಹ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ದೊರೆತಂತಾಗಿದೆ.
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಭವನೀಯ ಸಚಿವರು ಹಾಗೂ ಖಾತೆಗಳ ಪಟ್ಟಿ ಇಂತಿದೆ:
- ಹಣಕಾಸು- ಎಚ್.ಡಿ. ಕುಮಾರಸ್ವಾಮಿ
- ಗೃಹ- ಡಾ. ಜಿ. ಪರಮೇಶ್ವರ್
- ಇಂಧನ- ಡಿ.ಕೆ. ಶಿವಕುಮಾರ್
- ಜಲಸಂಪನ್ಮೂಲ- ಎಂ.ಬಿ. ಪಾಟೀಲ್
- ಬೆಂಗಳೂರು ಅಭಿವೃದ್ದಿ- ಕೆ.ಜೆ. ಜಾರ್ಜ್
- ಲೋಕೋಪಯೋಗಿ - ಹೆಚ್.ಡಿ. ರೇವಣ್ಣ
- ಸಹಕಾರ - ಜಿ.ಟಿ. ದೇವೇಗೌಡ
- ಕಂದಾಯ- ಹೆಚ್. ವಿಶ್ವನಾಥ್
- ಆರೋಗ್ಯ- ಯು.ಟಿ. ಖಾದರ್
- ವಸತಿ - ಎ. ಕೃಷ್ಣಪ್ಪ
- ಬೃಹತ್ ಕೈಗಾರಿಕೆ - ಆರ್.ವಿ. ದೇಶಪಾಂಡೆ
- ಕೃಷಿ - ಬಂಡೆಪ್ಪ ಕಾಶೆಂಪುರ್
- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ- ಬಸವರಾಜ್ ಹೊರಟ್ಟಿ
- ಉನ್ನತ ಶಿಕ್ಷಣ - ಡಾ. ಕೆ. ಸುಧಾಕರ್
- ವೈದ್ಯಕೀಯ ಶಿಕ್ಷಣ - ಡಾ. ಕೆ. ಶ್ರೀನಿವಾಸಮೂರ್ತಿ
- ಗ್ರಾಮೀಣಾಭಿವೃದ್ಧಿ - ಸಿ.ಎಸ್. ಪುಟ್ಟರಾಜು