ಬೆಂಗಳೂರು: ಆಪರೇಷನ್ ಕಮಲದ ಭೀತಿಯಲ್ಲಿ ಮುತ್ತಿನ ನಗರಿ ತಲುಪಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಭೇಟಿ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈದರಾಬಾದಿಗೆ ಪ್ರಯಾಣ ಬೆಳೆಸಿದ್ದಾರೆ.
ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ನಾಳೆ(ಶನಿವಾರ) ಸಂಜೆ ನಾಲ್ಕು ಗಂಟೆಗೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಈ ಬಗ್ಗೆ ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ಕಾಲಾವಕಾಶ ನೀಡಲು ಸಾಧ್ಯವಿಲ್ಲ. ನಾಳೆಯೇ ವಿಶ್ವಾಸಮತ ಯಾಚನೆಯಾಗಲಿ ಎಂದು ಆದೇಶ ನೀಡಿದೆ. ಇದೊಂದು ನಂಬರ್ ಗೇಮ್.. ಅತೀ ಹೆಚ್ಚು ಸಂಖ್ಯೆಯ ಅಥವಾ ಬಹುಮತ ಪಡೆದ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವುದು ಸರಿಯಾದ ಕ್ರಮ. ಆದರೆ ವಿಶ್ವಾಸಮತ ಯಾಚನೆ ಸೂಕ್ತ ನಿರ್ಧಾರವಾಗುತ್ತದೆ. ಹೀಗಾಗಿ ನಾಳೆ ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದ್ದು, ಅದಕ್ಕಿಂತ ಮೊದಲೇ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಬೇಕು ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕೈ- ತೆನೆಯ ನಾಯಕರೊಂದಿಗೆ ಸಮಾಲೋಷಣೆ ನಡೆಸಲು ಸಿದ್ದರಾಮಯ್ಯ ಹೈದರಾಬಾದಿಗೆ ತೆರಳಿದ್ದಾರೆ. ಪಕ್ಷದ ಮುಖಂಡರೊಂದಿಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದು, ಮಾಜಿ ಸಚಿವರಾದ ದೇಶಪಾಂಡೆ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಎಚ್.ಎಂ.ರೇವಣ್ಣ, ಶಾಸಕರಾದ ಹ್ಯಾರೀಸ್, ರಾಜಶೇಖರ ಪಾಟೀಲ್, ಸುಧಾಕರ್ ತೆರಳಿದ್ದಾರೆ.