ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಯ ಕೇಂದ್ರ ಆಕರ್ಷಣೆ ಆಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಮನೆ ದೇವರಾದ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ, ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದ ಸಿದ್ದರಾಮಯ್ಯ, ಅಲ್ಲಿಂದ ತಾಲೂಕು ಕಚೇರಿಗೆ ತೆರಳಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಸಿದ್ದರಾಮಯ್ಯ ಅವರ ಆಪ್ತ ಮರಿಗೌಡ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ರಾಜಕೀಯ ವಿರೋಧಿಗಳಿದ್ದಾರೆ. ಆದರೆ ಹಿತಶತ್ರುಗಳು, ಶತ್ರುಗಳು ಯಾರು ಇಲ್ಲ. ಈ ಚುನಾವಣೆ ಬಗ್ಗೆ ಯಾವುದೇ ಹೆದರಿಕೆ ಇಲ್ಲ. ಈ ಕ್ಷೇತ್ರದೊಂದಿಗೆ ಕೇವಲ ರಾಜಕೀಯವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದೇನೆ. ಸಾಮಾನ್ಯ ರೈತನ ಮಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವರೆಗೂ ನಿರಂತರ ಬೆಂಬಲವಾಗಿ ನಿಂತು, ಬೆಳೆಸಿದ ಇಲ್ಲಿನ ಜನತೆಗೆ ನಾನು ಚಿರಋಣಿ. ಚಾಮುಂಡೇಶ್ವರಿ ಕ್ಷೇತ್ರದಿಂದ ಈ ಬಾರಿ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯ ಭವಿಷ್ಯ ಮತ್ತು ಮರು ಹುಟ್ಟು ನೀಡಿದ ಕ್ಷೇತ್ರ. ಹಾಗಾಗಿಯೇ ಈ ಕ್ಷೇತ್ರದಿಂದಲೇ ತಮ್ಮ ಕೊನೆ ಚುನಾವಣೆ ಎದುರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಒಕ್ಕಲಿಗ ಮತಗಳನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜಿ.ಟಿ.ದೇವೇಗೌಡರನ್ನು ಕಣಕ್ಕಿಳಿಸಿದೆ. ಇದುವರೆಗೂ ಜೆಡಿಎಸ್ ಮತ್ತು ದೇವೇಗೌಡರನ್ನು ಟೀಕಿಸುತ್ತಲೇ ಬಂದಿರುವ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗರು ಮತ ಹಾಕುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಮತ್ತೊಂದೆಡೆ, ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭಯ ಕಾಡುತ್ತಿದೆ, ಹಾಗಾಗಿ ಗೆಲುವಿನ ಕುದುರೆಯೇರುವ ನಿಟ್ಟಿನಲ್ಲಿ ಕುರುಬ ಮತಗಳು ಹೆಚ್ಚಾಗಿರುವ ಬಾದಾಮಿ ಕ್ಷೇತ್ರದಲ್ಲಿಯೂ ಸ್ಪರ್ಧಿಸುವ ಚಿಂತನೆ ನಡೆಸುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದರು. ಅಲ್ಲದೆ, ಇಂದಿಗೂ ಅವರು ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆಯೇ, ಇಲ್ಲವೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಅದೇನೇ ಇರಲಿ, ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಚಾಮುಂಡೇಶ್ವರಿ ಕ್ಷೇತ್ರದ ಒಳ ಹೊರಗನ್ನು ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.