ಬೆಂಗಳೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಅವಧಿಯನ್ನು ವಿಸ್ತರಿಸಲಾಗಿದ್ದು, ಈ ಬಗ್ಗೆ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯುತ್ತಿತ್ತು. ಆದರೆ, ಈ ಬಾರಿ ವಿವಿ ಪ್ಯಾಟ್ ಬಳಕೆ ಮಾಡುತ್ತಿರುವುದರಿಂದ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಮತದಾರರು ಸಂಜೆ 6 ಗಂಟೆಯವರೆಗೂ ಮತದಾನ ಮಾಡಲು ಅವಕಾಶವಿರುತ್ತದೆ. ಈಗಾಗಲೇ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರಲ್ಲದೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏ.24 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಏ.25 ಅಂತಿಮ ದಿನವಾಗಿದೆ. ರಾಜ್ಯದಲ್ಲಿ ಒಟ್ಟು 4,96,357 ಕೋಟಿ ಮತದಾರರಿದ್ದು, 56,696 ಮತಗಟ್ಟೆಗಳಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಮೇ 15ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಹೊರಬೀಳಲಿದೆ.