ಕರ್ನಾಟಕ ವಿಧಾನಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಭರದಿಂದ ಸಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿವೆ. ಈ ಮಧ್ಯೆ ರಾಜ್ಯದಲ್ಲಿ ಇತರ ರಾಜಕೀಯ ಪಕ್ಷಗಳೂ ಸಹ ಬಹಳ ಉತ್ಸುಕತೆಯಿಂದ ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುವಲ್ಲಿ ಮುಂದಾಗಿವೆ.
2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಉಂಟಾದ ಭಿನ್ನಮತದಿಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಮತ್ತು ಶ್ರೀರಾಮುಲು ನೇತೃತ್ವದ ಬಡವರ ಶ್ರಮಿಕರ ರೈತರ ಕಾಂಗ್ರೆಸ್ (ಬಿಎಸ್ಆರ್ ಕಾಂಗ್ರೆಸ್) ಪಕ್ಷಗಳು ಹುಟ್ಟಿಕೊಂಡವು. ಈ ಇಬ್ಬರು ನಾಯಕರೂ ಬಿಜೆಪಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದವರು. ಆದರೆ ಪಕ್ಷ ಒಡೆದು ಛಿದ್ರವಾಗಿದ್ದರಿಂದ ಬಿಜೆಪಿಯ ಶೇ.15ರಷ್ಟು ಮತಗಳು ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಪಿಜೆಪಿ ನಡುವೆ ಹಂಚಿಕೆಯಾಗಿತ್ತು. ಬಿಜೆಪಿ ಮತಗಳ ಹಂಚಿಕೆಯನ್ನು ಲಾಭವಾಗಿಸಿಕೊಂಡ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ 5 ವರ್ಷಗಳ ಯಶಸ್ವಿ ಆಡಳಿತ ನಡೆಸಿರುವ ಕಾಂಗ್ರೆಸ್'ಗೆ ಈ ಬಾರಿ ವಿಧಾನಸಭೆ ಚುನಾವಣೆ ಸ್ವಲ್ಪ ಕಗ್ಗಂಟಾಗಿದೆ. ಅಂದು ಬಿಜೆಪಿಯಿಂದ ಹೊರಬಂದು ಪಕ್ಷಗಳನ್ನು ಕಟ್ಟಿದ್ದ ಯಡಿಯೂರಪ್ಪ ಮತ್ತು ಶ್ರೀರಾಮುಲು ಈಗ ಬೆಜೆಪಿಗೆ ಹಿಂದಿರುಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್, ಮೇ 12ಕ್ಕೆ ಮತದಾನ
ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಇತರ ಪಕ್ಷಗಳಾದ ಬಹುಜನ ಸಮಾಜ ಪಕ್ಷ, ಆಮ್ ಆದ್ಮಿ ಪಕ್ಷ, ಎಐಎಂಐಎಂ, ಶಿವಸೇನೆ, ಆಲ್ ಇಂಡಿಯಾ ಮಹಿಳಾ ಸಬಲೀಕರಣ ಪಕ್ಷ (AIMEP) ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುತ್ತಿವೆ. ಹೀಗಾಗಿ, ಕಾಂಗ್ರೆಸ್ ಮತಗಳು ಈ ಪಕ್ಷಗಳ ನಡುವೆ ಹಂಚಿಕೆಯಾಗುವ ಸಾಧ್ಯತೆ ಇದೆ.
ಬಹುಜನ ಸಮಾಜ ಪಕ್ಷ (ಬಿಎಸ್ಪಿ)
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ದಲಿತರ ಪಕ್ಷ ಎಂದೇ ಹೆಸರಾಗಿರುವ ಬಿಎಸ್ಪಿ ಅಭ್ಯರ್ಥಿಗಳಿರುವಲ್ಲಿ ಕಾಂಗ್ರೆಸ್'ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಪಕ್ಷ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಚುನಾವಣೆ 2018 : ಬಿಎಸ್ ಪಿ-ಜೆಡಿಎಸ್ ಮೈತ್ರಿ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮನ್ನು 'ಅಹಿಂದ' ನಾಯಕ ಎಂದೇ ಬಿಂಬಿಸಿಕೊಂಡಿರುವುದರಿಂದ ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗದ ಮತಗಳು ಕಾಂಗ್ರೆಸ್ ಪರವಾಗಿತ್ತು. ಆದರೀಗ ಬಿಎಸ್ಪಿ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಹಿನ್ನೆಲೆಯಲ್ಲಿ ದಲಿತ ಮತಗಳು ಬಿಎಸ್ಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ.
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹುದುಲ್ ಮುಸ್ಲಿಮೀನ್ (AIMIM)
ಅಸಾದುದ್ದೀನ್ ಓವೈಸಿ ನೇತೃತ್ವದ ಹೈದರಾಬಾದ್ ಮೂಲದ ಎಐಎಂಐಎಂ ಪಕ್ಷ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕನಿಷ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ ಇದೀಗ ಓವೈಸಿ ಅವರು ಕರ್ನಾಟಕ ಚುನಾವಣೆಯಲ್ಲಿ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಬದಲಾಗಿ ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದ ಮುಸ್ಲಿಂ ವರ್ಗದ ಮತಗಳು ಇದೀಗ ಜೆಡಿಎಸ್ ಪಾಲಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ.
ಜೆಡಿಎಸ್ ಪಕ್ಷವು ಕರ್ನಾಟಕವನ್ನು ಆಳಬೇಕು-ಅಸಾದುದ್ದೀನ್ ಓವೈಸಿ
ಆಮ್ ಆದ್ಮಿ ಪಕ್ಷ (ಎಎಪಿ)
ದೆಹಲಿಯ ಅರವಿಂದ್ ಕೆಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಗೆ 40 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದೆ. ಈಗಾಗಲೇ ಎರಡು ಪಟ್ಟಿಗಳಲ್ಲಿ 28 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವ ಎಎಪಿ ಉಳಿದ ಅಭ್ಯರ್ಥಿಗಳನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಹೇಳಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಆಲ್ ಇಂಡಿಯಾ ಮಹಿಳಾ ಸಬಲೀಕರಣ ಪಾರ್ಟಿ(ಎಐಎಂಇಪಿ)
ಉದ್ಯಮಿ ಡಾ. ನೌಹೀರಾ ಶೇಖ್ ನೇತೃತ್ವದ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷ ಈ ಬಾರಿ ಚುನಾವಣೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಎಐಎಂಇಪಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ಆದರೆ "ರಾಷ್ಟ್ರೀಯ ಪಕ್ಷಗಳ ಕೆಲವರು ಹೊಂದಾಣಿಕೆಗಾಗಿ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಪಕ್ಷ ಸ್ಪರ್ಧಿಸಲಿದೆ. ನ್ಯಾಯ ಮತ್ತು ಮಾನವೀಯತೆ ಧ್ಯೇಯದೊಂದಿಗೆ, ಭ್ರಷ್ಟಾಚಾರ ಮುಕ್ತ ಆಡಳಿತ ರಾಜ್ಯಕ್ಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ತಿಳಿಸಿದ್ದಾರೆ.
ಒಟ್ಟಾರೆ, ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲೂ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಬೀಗುತ್ತಿದೆ. ಅಹಿಂದ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರೂ ಸರ್ಕಾರ ರಚನೆಯ ಬಗ್ಗೆ ಬಹಳಷ್ಟು ವಿಶ್ವಾಸ ಹೊಂದಿದ್ದಾರೆ. ಆದರೆ, ಇದುವರೆಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದ ಹಿಂದುಳಿದ, ದಲಿತ ಮತ್ತು ಮುಸಲ್ಮಾನ ವರ್ಗದ ಜನತೆ ತಮ್ಮದೇ ವರ್ಗದ ಪಕ್ಷಗಳಉ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಬಿಟ್ಟು ಇತರ ಪಕ್ಷಗಳೆಡೆಗೆ ವಾಲುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಅಷ್ಟು ಸುಲಭದ ಮಾತೇನಲ್ಲ.
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ15 ರಂದು ಫಲಿತಾಂಶ ಹೊರಬೀಳಲಿದೆ.