ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್ಎ ಬಿ.ಜೆ.ಪುಟ್ಟಸ್ವಾಮಿ 300 ಕೋಟಿ ರೂಪಾಯಿಗಳ ಭೂಹಗರಣದ ಆರೋಪ ಮಾಡಿದ್ದಾರೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ, ವಕ್ತಾರ ಗೋ.ಮಧುಸೂಧನ್, ಶಾಸಕ ರವಿ ಸುಬ್ರಹ್ಮಣ್ಯ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಭೂಹಗರಣ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಡಿನೋಟಿಫೈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ.
ನಮ್ಮದು ಹಗರಣ ಮುಕ್ತ ಸರ್ಕಾರ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ, ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿರುವ ಭೂಪಸಂದ್ರ ಗ್ರಾಮದಲ್ಲಿ ಸುಮಾರು 300 ಕೋಟಿ ಮೌಲ್ಯದ 6 ಎಕರೆಯಷ್ಟು ಜಮೀನನ್ನು ಮೂಲ ಮಾಲೀಕರಿಗೆ ಬಿಟ್ಟುಕೊಡುವ ಪ್ರಯತ್ನ ನಡೆದಿದ್ದು, ಸಿಎಂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ಬಿ.ಜೆ. ಪುಟ್ಟಸ್ವಾಮಿ ಮಾಡಿರುವ ಭೂಹಗರಣದ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾನನಷ್ಟ ಮೊಕದ್ದಮೆ ಹೂಡಲು ವಕೀಲರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.