Corona Vaccine: ಆದಷ್ಟು ಬೇಗ ಕೊರೋನಾ ಲಸಿಕೆ ಕೊರತೆ ನಿವಾರಿಸಿ, ಎಲ್ಲರಿಗೂ ಲಸಿಕೆ ಕೊಡಿ-ಸಿದ್ದರಾಮಯ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆ ಹಾಕುವುದಾಗಿ ಘೋಷಿಸಿದರು‌. ಆದರೀಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆ ಹಾಕಯವ ಕೆಲಸವನ್ನು ಮುಂದೂಡಿದೆ. ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Written by - Yashaswini V | Last Updated : May 1, 2021, 05:05 PM IST
  • ಕೆಪಿಸಿಸಿ ವತಿಯಿಂದ ಕೊರೋನಾ ಸಂತ್ರಸ್ತರಿಗಾಗಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆಯ ಉದ್ಘಾಟನೆ
  • ಮಾತು ತಪ್ಪಿದ ಪ್ರಧಾನಿ ಮೋದಿ ದೇಶದ ಜನರ ಎದುರು ಕ್ಷಮೆ ಕೇಳುವಂತೆ ಸಿದ್ದರಾಮಯ್ಯ ಒತ್ತಾಯ
  • 18 ವರ್ಷದೊಳಗಿನವರಿಗೂ ಶೀಘ್ರವಾಗಿ ಲಸಿಕೆ ನೀಡಲು ಗಂಭೀರ ಪ್ರಯತ್ನ ಮಾಡುವಂತೆಯೂ ಆಗ್ರಹ
Corona Vaccine: ಆದಷ್ಟು ಬೇಗ ಕೊರೋನಾ ಲಸಿಕೆ ಕೊರತೆ ನಿವಾರಿಸಿ, ಎಲ್ಲರಿಗೂ ಲಸಿಕೆ ಕೊಡಿ-ಸಿದ್ದರಾಮಯ್ಯ title=
File Image

ಬೆಂಗಳೂರು: ಕೊರೋನಾ ಲಸಿಕೆ (Corona vaccine)ಗಳ ಕೊರತೆಯಿಂದಾಗಿ ಇಂದಿನಿಂದ ದೇಶಾದ್ಯಂತ ನಡೆಯಬೇಕಿದ್ದ ಮೂರನೇ ಹಂತದ ಕೊರೋನಾ ಲಸಿಕೆ ನೀಡುವ ಅಭಿಯಾನ (Third Phase of Covid Vaccination) ಸರಿಯಾಗಿ ಆರಂಭವಾಗಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ತೀವ್ರವಾಗಿದ್ದು, ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ (KPCC) ವತಿಯಿಂದ ವ್ಯವಸ್ಥೆಗೊಳಿಸಿರುವ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆಯ (Ambulance and Helpline) ಉದ್ಘಾಟನೆ ವೇಳೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆ ಹಾಕುವುದಾಗಿ ಘೋಷಿಸಿದರು‌. ಆದರೀಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆ ಹಾಕಯವ ಕೆಲಸವನ್ನು ಮುಂದೂಡಿದೆ. ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು. 

18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ ಅವರು ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದರು‌.

ಇದನ್ನೂ ಓದಿ - Corona Vaccine: ಇಂದಿನಿಂದ ಈ 6 ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ

ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ (Online) ಮೂಲಕ ಜನರು ಹೆಸರನ್ನು ನೋಂದಣಿ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಈ ಆನ್‌ಲೈನ್ ನೋಂದಣಿ ಕಷ್ಟದ ಕೆಲಸ, ಹೀಗಾಗಿ ಕೊರೊನಾ ಲಸಿಕೆ ನೀಡುವುದನ್ನು ಪೋಲಿಯೋ ಲಸಿಕೆ ಮಾದರಿಯಲ್ಲೆ (Polio model) ಒಂದು ಅಭಿಯಾನವಾಗಿ ರೂಪಿಸಿ, ಜನರ ಬಳಿಗೆ ಹೋಗಿ ಲಸಿಕೆ ನೀಡಬೇಕು ಎಂದು ಹೇಳಿದರು.

ಕೊರೊನಾ ಲಸಿಕೆ (Corona Vaccine) ಪಡೆದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ತುಂಬಾ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿರುವ 18 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಎಲ್ಲರಿಗೂ ಶೀಘ್ರವಾಗಿ ಲಸಿಕೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು. ಸರ್ಕಾರದ ಮುಖ್ಯಕಾರ್ಯದರ್ಶಿಯವರ ಜೊತೆ ಲಸಿಕೆ ವಿಚಾರವಾಗಿ ಚರ್ಚಿಸಿದ್ದೇನೆ. ಆರುವರೆ ಕೋಟಿ ಲಸಿಕೆಯ ಅಗತ್ಯವಿದೆ ಎಂದಿದ್ದಾರೆ. ನನ್ನ ಪ್ರಕಾರ ಈ ತಿಂಗಳ ಅಂತ್ಯದ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲು ಸಾಧ್ಯವಾಗದು. ಬೇಗ ಸಿಕ್ಕಿದ್ದರೆ ಸೋಂಕು ಇನ್ನಷ್ಟು ಕಡಿಮೆಯಾಗುತ್ತಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್ ಗಳಿಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್ ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಗಷ್ಟೇ ಕೇಂದ್ರ ಸರ್ಕಾರ ಹಣ ಕೊಡುವುದು, ಅದಕ್ಕಿಂತ ಕೆಳಗಿನ ವಯೋಮಾನದ ಜನರಿಗೆ ನೀಡುವ ಲಸಿಕೆಗೆ ರಾಜ್ಯಗಳೇ ಹಣ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದೊಂದೆ ಸೋಂಕು ತಡೆಗಟ್ಟಲು ಇರುವ ದಾರಿ, ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ - Corona Vaccine Side Effect : ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..!

ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ ಎಂದು ಸಿದ್ದರಾಮಯ್ಯ ಆಪಾದಿಸಿದರು.

ರಾಜ್ಯ ಕಾಂಗ್ರೆಸ್ ಪಕ್ಷವು ಬಡರೋಗಿಗಳಿಗಾಗಿ 10 ಆಂಬುಲೆನ್ಸ್ ಗಳನ್ನು ವ್ಯವಸ್ಥೆಗೊಳಿಸಿ ಅವುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ ಹಾಗೂ ಕೊರೊನಾ ಸಹಾಯವಾಣಿಯನ್ನು ತೆರೆದು ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡುತ್ತಿದೆ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಇಂಥಾ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು, ನೆರವಾಗಬೇಕು ಎಂದು ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News