ಧಾರವಾಡ: ಮರಾಠಾ ಪ್ರಾಧಿಕಾರ ಬೇಡ ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಇಲ್ಲವಾದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಮರಾಠ ಕ್ರಾಂತಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅಂಜಲಿ ನಿಂಬಾಳ್ಕರ್(Anjali Nimbalkar), ಮರಾಠ ಸಮಾಜದ ಬಗ್ಗೆ ಕಾಳಜಿ ಇದ್ದರೆ 2 ಎ ಮೀಸಲಾತಿ ನೀಡಲಿ ಎಂದರು. ನಾವೂ ಸ್ವಲ್ಪ ಈಗ ಚುನಾವಣಾ ತಂತ್ರಗಳನ್ನು ಮಾಡುತ್ತೆವೆ. ನಾವು ಕೂಡ ಸಮಾಜದ ಮುಖಂಡರಿಂದ ಸರ್ಕಾರಕ್ಕೆ ಪತ್ರ ಬರೆಯಿಸುತ್ತೇವೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ನಾವು ಸಿಎಂ ಯಡಿಯೂರಪ್ಪನವರ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳೂ ಅಲ್ಲ. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ ಎಂದು ತಿಳಿಸಿದರು.
ರೋಷನ್ ಬೇಗ್ ಬಳಿಕ ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಸಂಕಷ್ಟ: ED ಬಂಧನ ಸಾಧ್ಯತೆ!
ಇದೇ ಸಂದರ್ಭದಲ್ಲಿ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ ಅಂಜಲಿ, ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಮಾರವಾಡಿ, ಲಿಂಗಾಯತ, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಮಾತನಾಡಿದರೆ ಅರ್ಥ ಆಗುವುದಿಲ್ಲ. ಅದಕ್ಕೆ ನಾವು ಅಲ್ಲಿ ಮರಾಠಿ ಭಾಷೆಯನ್ನೇ ಮಾತನಾಡುತ್ತೇವೆ ಎಂದು ಹೇಳಿದರು.