ನವದೆಹಲಿ: ಯುವಕರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ ಪಕ್ಷದ (Indian Youth Congress) ಸಾವಿರಾರು ಕಾರ್ಯಕರ್ತರು ಮಂಗಳವಾರ ಇಲ್ಲಿನ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ್ (BV Srinivas) ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಯುವಕರ ವಿರೋಧಿ ಮತ್ತು ರೈತರ ವಿರೋಧಿಯಾಗಿದೆ. ಮೋದಿ ತಮ್ಮ ಕೈಗಾರಿಕೋದ್ಯಮಿ ಗೆಳೆಯರಿಗೆ ಅನುಕೂಲ ಮಾಡಿಕೊಡಲು ರೈತ ವಿರೋಧಿ ಕಾನೂನುಗಳನ್ನು ತಂದಿದ್ದಾರೆ. ಕೂಡಲೇ ಈ ಜನವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಯುವ ಕಾಂಗ್ರೆಸ್ ಬೀದಿಗಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಮೂಕ ಮತ್ತು ಕಿವುಡರನ್ನು ಜಾಗೃತಗೊಳಿಸಲು ಇಂದು ನಾವು ಸಂಸತ್ತಿಗೆ ಘೆರಾವ್ ಹಾಕುತ್ತಿದ್ದೇವೆ. ಭಾರತದ ಸಾಮಾನ್ಯ ಜನರ ಧ್ವನಿ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.
ಇಐಎ 2020 ಕರಡು, ಸೂಟ್-ಬೂಟ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವಿ. ಶ್ರೀನಿವಾಸ್
ಪ್ರತಿಭಟನೆ ವೇಳೆ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಗಳನ್ನೂ ಸುಟ್ಟುಹಾಕಿದರು. ಯುವಜನರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರವನ್ನು ಜಾಗೃತಗೊಳಿಸಲು ಭಾರತೀಯ ಯುವ ಕಾಂಗ್ರೆಸ್ ಈಗಾಗಲೇ 'ರೋಜ್ಗರ್ ದೋ' (RozgarDo) ಅಭಿಯಾನವನ್ನು ನಡೆಸುತ್ತಿದೆ. ಈ ಬಗ್ಗೆ ಮಾತನಾಡಿದ ಶ್ರೀನಿವಾಸ್ ಬಿ.ವಿ ಅವರು, "ಕೇಂದ್ರ ಸರ್ಕಾರವು ಯುವಕರ ಮತಗಳನ್ನು ಪಡೆಯುತ್ತದೆ, ಆದರೆ ಯುವಕರು ಉದ್ಯೋಗ ಕೇಳಿದಾಗ ಲಾಟಿಯಿಂದ ಹೊಡೆಯುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೂತ್ ಕಾಂಗ್ರೆಸ್ ವತಿಯಿಂದ 'ಕೆಲಸ ನೀಡಿ' ಅಭಿಯಾನ
ಇದು ಸೂಟ್-ಬೂಟ್ ಸರ್ಕಾರ ಎಂದು ರಾಹುಲ್ ಗಾಂಧಿ (Rahul Gandhi) ಅವರು ಪದೇ ಪದೇ ಹೇಳಿದ್ದಾರೆ. ಸತ್ಯವೆಂದರೆ ಈ ಸರ್ಕಾರ 130 ಕೋಟಿ ಭಾರತೀಯರಿಗಾಗಿ ಅಲ್ಲ, ಎರಡರಿಂದ ನಾಲ್ಕು ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ. ಇದರ ಆದ್ಯತೆಗಳು ಯುವಕರಿಗೆ ಉದ್ಯೋಗ ನೀಡುವುದಲ್ಲ, ಕೈಗಾರಿಕೋದ್ಯಮಿ ಸ್ನೇಹಿತರಿಗೆ ಅನುಕೂಲ ಮಾಡಿಕೊಡುವುದಾಗಿದೆ ಎಂದರು.
ಕೇಂದ್ರ ಸರ್ಕಾರ 6 ವರ್ಷಗಳಿಂದ ಯುವಕರಿಗೆ ದ್ರೋಹ ಬಗೆದಿದೆ. ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ಈಗ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ರೈತರಿಗೆ ಮಾರಕವಾಗುವಂತಹ ಕಾನೂನುಗಳನ್ನು ತರಲಾಗಿದೆ. ನೀವು ದೇಶದ ಪ್ರಜಾಪ್ರಭುತ್ವವನ್ನು ನಾಶಮಾಡಲು ಅಚಲವಾಗಿದ್ದರೆ ನಾವು ಪ್ರಜಾಪ್ರಭುತ್ವವನ್ನು ಉಳಿಸಲು ದೃಢ ನಿಶ್ಚಯವನ್ನು ಹೊಂದಿದ್ದೇವೆ ಎಂದು ಅಭಿಪ್ರಾಯಪಟ್ಟರು.