ನವದೆಹಲಿ: COVID-19 ಕರಿನೆರಳಿನಲ್ಲೇ ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliament Mansoon Session) ಶುರುವಾಗುತ್ತಿದೆ. COVID-19 ಕಾರಣಕ್ಕೆ ಈ ಬಾರಿಯ ಅಧಿವೇಶನ ಬಹಳ ಭಿನ್ನವಾಗಿಯೂ ನಡೆಯಲಿದೆ. ಆದರೆ ಕಡಿಮೆ ಸಮಯ ನಡೆಯುವ ಈ ಅಧಿವೇಶನದಲ್ಲಿ ಬಹಳಷ್ಟು ವಿಷಯಗಳು ಚರ್ಚೆ ಆಗಬೇಕಿದೆ. ಚರ್ಚೆ ಆಗುತ್ತಾ ಎನ್ನುವುದು ಪ್ರಶ್ನೆಯಾಗಿದೆ.
ಅಕ್ಟೋಬರ್ 1ರವರೆಗೆ ಮಧ್ಯೆ ಒಂದು ದಿನವೂ ರಜೆ ಇಲ್ಲದೆ ಒಟ್ಟು 18 ದಿನ ನಡೆಯುವ ಸಂಸತ್ ಅಧಿವೇಶನದಲ್ಲಿ ಭಾರತ ಮತ್ತು ಚೀನಾ ಗಡಿ ಸಂಘರ್ಷ (India-Chaina Border Issue), ಜಿಡಿಪಿ ಕುಸಿತ (GDP Debacle), ಆರ್ಥಿಕ ಬಿಕ್ಕಟ್ಟು (Economic Issue), ವೇಗವಾಗಿ ಹರಡುತ್ತಿರುವ ಕೊರೊನಾ (Fast Spreading of COVID-19) ವಿಷಯಗಳು ಚರ್ಚೆಯಾಗಬೇಕಿದೆ. ವಿರೋಧ ಪಕ್ಷಗಳು ಕೂಡ ಈ ಮಹತ್ವದ ವಿಷಯಗಳನ್ನು ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿ ಚರ್ಚೆ ಮಾಡಲು ಸಿದ್ದವಿದ್ದಂತೆ ಕಂಡುಬರುತ್ತಿಲ್ಲ.
ಈ ಬಾರಿಯ ಅಧಿವೇಶನವನ್ನು ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಇನ್ನೊಂದು ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಂದು ದಿನ ಬೆಳಿಗ್ಗೆ ಲೋಕಸಭೆ ಮಧ್ಯಾಹ್ನ ರಾಜ್ಯಸಭೆ, ಇನ್ನೊಂದು ದಿನ ಬೆಳಿಗ್ಗೆ ರಾಜ್ಯಸಭೆ ಮಧ್ಯಾಹ್ನ ಲೋಕಸಭಾ ಕಲಾಪಗಳನ್ನು ನಡೆಸಲಾಗುತ್ತದೆ. COVID-19 ಕಾರಣಕ್ಕೆ ಸಂಸದರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಆಸನದ ವ್ಯವಸ್ಥೆ ಮಾಡಲು ಶಿಫ್ಟ್ ಗಳ ಮೊರೆಹೋಗಲಾಗಿದೆ.
ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಿಗೆ ಲೋಕಸಭೆ, ರಾಜ್ಯಸಭೆ ಎರಡೂ ಸಭೆಯ ಗ್ಯಾಲರಿಗಳು ಹಾಗೂ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯವೇಳೆ ಇರುವುದಿಲ್ಲ. ಪ್ರೈವೇಟ್ ಮೆಂಬರ್ ಬಿಲ್ ಮಂಡನೆ ಮಾಡುವುದಕ್ಕೂ ಅವಕಾಶ ನೀಡಿಲ್ಲ.
ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಜೊತೆಗೆ ಎಲ್ಲರೂ ಕೂಡ ಕಲಾಪ ಆರಂಭವಾಗುವ ಒಂದು ಗಂಟೆ ಮೊದಲೇ ಸಂಸತ್ ಭವನದಲ್ಲಿರುವಂತೆ ಸೂಚಿಸಲಾಗಿದೆ. ಪ್ರತಿಯೊಬ್ಬ ಸದಸ್ಯರನ್ನೂ ತಪಾಸಣೆ ಮಾಡಿ ಒಳಗಡೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಸಂಸದರ ಆಪ್ತ ಸಹಾಯಕರಿಗೆ ಸಂಸತ್ ಭವನದ ಪ್ರವೇಶಾವಕಾಶವನ್ನು ನಿರಾಕರಿಸಲಾಗಿದೆ.