ನವದೆಹಲಿ: ಕರೋನಾ ವೈರಸ್ ವಿರುದ್ಧದ ಹೋರಾಟ ಗೆಲ್ಲಲು ಲಸಿಕೆಗಾಗಿ ಇಡೀ ಜಗತ್ತು ಕಾಯುತ್ತಿದೆ. ವಿಶ್ವದ ಆಯ್ದ ಕೆಲವು ದೇಶಗಳಂತೆ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಕೂಡ ಉತ್ತಮ ಯಶಸ್ಸನ್ನು ಸಾಧಿಸಿದೆ. ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ತನ್ನ ಲಸಿಕೆಯ ಮಾನವ ಪ್ರಯೋಗ ಜುಲೈನಿಂದ ಪ್ರಾರಂಭಿಸಲಿದೆ ಎಂದು ಹೇಳಿದೆ. ದೇಶದ ಮೊದಲ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಅನ್ನು ಯಶಸ್ವಿಯಾಗಿ ಉತ್ಪಾದಿಸಿದೆ ಎಂದು ಕಂಪನಿ ಸೋಮವಾರ ಹೇಳಿಕೊಂಡಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಯಿಂದ ಮಾನವ ಪ್ರಯೋಗಗಳ ಅನುಮೋದನೆ ಕೂಡ ದೊರೆತಿದೆ ಎಂದು ಕಂಪನಿ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಲಸಿಕೆ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದೆ
"SARS-COV-2 ಸ್ಟ್ರೈನ್ ಅನ್ನು ಎನ್ಐವಿ ಪುಣೆಯಲ್ಲಿ ಪ್ರತ್ಯೇಕಿಸಿ ನಂತರ ಭಾರತ್ ಬಯೋಟೆಕ್ ಕಳುಹಿಸಲಾಗಿತ್ತು" ಎಂದು ಕಂಪನಿ ತಿಳಿಸಿದೆ. ಸ್ವದೇಶಿ ಇನ್ ಆಕ್ಟಿವೇಟೆಡ್ ಲಸಿಕೆಯನ್ನು ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಹೈ ಕಂಟೈನ್‌ಮೆಂಟ್ ಫೆಸಿಲಿಟಿ ಲ್ಲಿ ಅಭಿವೃದ್ಧಿಪಡಿಸಿ ಉತ್ಪಾದಿಸಲಾಗಿದೆ. ಇದು ಹೈದರಾಬಾದ್‌ನ ಜಿನೋಮ್ ವ್ಯಾಲಿಯಲ್ಲಿದೆ.
ಪ್ರಿಕ್ಲಿನಿಕಲ್ ಅಧ್ಯಯನಗಳಲ್ಲಿ ಸುರಕ್ಷಿತ ಮತ್ತು ರೋಗನಿರೋಧಕ ಪ್ರತಿಕ್ರಿಯೆಯನ್ನು ಕಂಡುಕೊಂಡ ನಂತರ, ಫಲಿತಾಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ)ಗೆ ಕಳುಹಿಸಲಾಗಿದ್ದು ನಿಯಂತ್ರಕ ಪ್ರಾಧಿಕಾರ ಕೂಡ ಹಂತ I ಮತ್ತು ಹಂತ II ರ ಹ್ಯೂಮನ್ ಕ್ಲಿನಿಕ್ ಟ್ರಯಲ್ ಗಾಗಿ ಅನುಮೋದಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಇಲ್ಲಾ, "ಜುಲೈ 2020 ರಲ್ಲಿ ರಾಷ್ಟ್ರವ್ಯಾಪಿ ಮಾನವ ಪ್ರಯೋಗವನ್ನು ಪ್ರಾರಂಭಿಸಲಾಗುವುದು" ಎಂದು ಹೇಳಿದ್ದಾರೆ. ಈ ಲಸಿಕೆ ಅಭಿವೃದ್ಧಿ ಒಂದು ಮೈಲಿಗಲ್ಲು ಮತ್ತು ಅದನ್ನು ಘೋಷಿಸಲು ಕಂಪನಿಯು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದ್ದಾರೆ.
"ಈ ಲಸಿಕೆಯ ಅಭಿವೃದ್ಧಿಯಲ್ಲಿ ಐಸಿಎಂಆರ್ ಮತ್ತು ಎನ್ಐವಿ ಸಹಕಾರ ಮುಖ್ಯವಾಗಿದೆ" ಎಂದು ಇಲಾ ಹೇಳಿದ್ದಾರೆ. "ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ನ ಸಕ್ರಿಯ ಬೆಂಬಲ ಮತ್ತು ಮಾರ್ಗದರ್ಶನದಿಂದ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ. ನಮ್ಮ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ತಂಡಗಳು ಇದಕ್ಕಾಗಿ ಸಾಕಷ್ಟ್ರು ಶ್ರಮಿಸಿವೆ" ಎಂದು ಇಲಾ ಹೇಳಿದ್ದಾರೆ.
ನ್ಯಾಷನಲ್ ರೆಗ್ಯುಲೇಟರಿ ಪ್ರೊಟೊಕಾಲ್ಗಳ ಮೂಲಕ ಕಂಪನಿಯು ಪ್ರಿಕ್ಲಿನಿಕಲ್ ಅಧ್ಯಯನಗಳ ಗುರಿಯನ್ನು ವೇಗವಾಗಿ ಸಾಧಿಸಿದೆ. ಈ ಲಸಿಕೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರತಿರೋಧಕ ಕ್ಷಮತೆ ಹೊಂದಿದ ಎಂದು ಈ ಅಧ್ಯಯನಗಳ ಫಲಿತಾಂಶಗಳು ತೋರಿಸಿವೆ. ಭಾರತದ ಬಯೋಟೆಕ್‌ನ ಸಂಶೋಧನೆ ಮತ್ತು ಸಾಂಕ್ರಾಮಿಕ ಮುನ್ಸೂಚನೆ ಸಾಮರ್ಥ್ಯವು H1N1 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿಯೂ ಕೂಡ ಸಫಲವಾಗಿತ್ತು ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಇಲ್ಲಾ ಹೇಳಿದ್ದಾರೆ. "ರಾಷ್ಟ್ರೀಯ ಪ್ರಾಮುಖ್ಯತೆಯ ಲಸಿಕೆ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ, ಇದರಿಂದಾಗಿ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಭಾರತದ ಶಕ್ತಿಯನ್ನು ಇದು ತೋರಿಸುತ್ತದೆ" ಎಂದು ಅವರು ಹೇಳಿದ್ದಾರೆ.