Sanju weds Geeta: ನಾಗಶೇಖರ್ ನಿರ್ದೇಶನದ "ಸಂಜು ವೆಡ್ಸ್ ಗೀತಾ-2" ಜ.10 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ೫ ವರ್ಷಗಳ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ಚಿತ್ರದ ನಿರ್ಮಾಪಕರು ಹೈದರಾಬಾದ್ ಸಿವಿಲ್ ಕೋರ್ಟ್ ನಲ್ಲಿ ನಾಗಶೇಖರ್ ಮೇಲೆ ಕೇಸ್ ಹಾಕಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು.
ಚಿತ್ರದ ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತ ಇದ್ದದ್ದೇ ಇದಕ್ಕೆಲ್ಲ ಕಾರಣ. ಬಿಡುಗಡೆಯ ಹಿಂದಿನ ದಿನವಷ್ಟೇ ಸ್ಟೇ ತಂದಿದ್ದರಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ತಕ್ಷಣ ಲಾಯರ್ ಜತೆ ಹೈದರಾಬಾದ್ ಗೆ ಹೊರಟ ನಿರ್ಮಾಪಕ ಕುಮಾರ್ ಈ ಸಿನಿಮಾದ ನಿರ್ಮಾಪಕ ನಾನೊಬ್ಬನೇ. ನಾಗಶೇಖರ್ ನಿರ್ದೇಶಕ ಮಾತ್ರ. ನಮ್ಮ ಮಾಲೀಕತ್ವದ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಚಿತ್ರ ನಿರ್ಮಿಸಲಾಗಿದೆ ಎಂದು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ಸ್ಟೇ ವೆಕೇಟ್ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕು. ಅಲ್ಲಿಯವರೆಗೆ ನಾಲ್ಕೂವರೆ ಕೋಟಿ ಜಾಮೀನು ನೀಡಿ ಎಂದಾಗ, ಅದೇ ಮೊತ್ತದ ತಮ್ಮ ಪ್ರಾಪರ್ಟಿ ಪತ್ರಗಳನ್ನು ಜಾಮೀನು ನೀಡಿ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಹಾಗಾಗಿ ಜನವರಿ 17ರಂದು 'ಸಂಜು ವೆಡ್ಸ್ ಗೀತಾ-2 ಬಿಡುಗಡೆಯಾಗಲಿದೆ. ನಿನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮೇಲಿನ ಮಾಹಿತಿಯನ್ನು ಚಿತ್ರತಂಡ ನೀಡಿತು.
ಈ ಸಂದರ್ಭದಲ್ಲಿ ನಿರ್ಮಾಪಕ ಚಲವಾದಿ ಕುಮಾರ್, ನಿರ್ದೇಶಕ ನಾಗಶೇಖರ್, ಕಥೆಗಾರ ಚಂದ್ರಚೂಡ್, ನಾಯಕನಟ ಶ್ರೀನಗರ ಕಿಟ್ಟಿ ಜತೆಗೆ ಸಹ ನಿರ್ಮಾಪಕ ಕಿಟ್ಟಿ ಮಂಡ್ಯ ಕೂಡ ಹಾಜರಿದ್ದರು.
ನಾನು ಈ ಚಿತ್ರದ ನಿರ್ದೇಶಕ ಮಾತ್ರ ಎಂದ ನಾಗಶೇಖರ್, ಇದರ ಹಣಕಾಸಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಈಗ ಗೊಂದಲ ಬಗೆಹರಿದಿದ್ದು, 17 ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದರು. ನಿರ್ಮಾಪಕ ಕುಮಾರ್ ಮಾತನಾಡಿ ನಾವು ಥೇಟರ್ ಸೆಟಪ್ ಮಾಡಿಕೊಂಡು ರೆಡಿಯಾದ ಮೇಲೆ, ದಿ.೮ರ ಮಧ್ಯಾಹ್ನ 3 ಗಂಟೆಗೆ ನಮಗೆ ಸ್ಟೇ ಆರ್ಡರ್ ಕಾಪಿ ಸಿಗುತ್ತದೆ. ಪ್ರೊಸಿಜರ್ ಪ್ರಕಾರ ಅವರು ಮೊದಲು ನನಗೆ ನೋಟೀಸ್ ಕೊಡಬೇಕಿತ್ತು. ಹಾಗೆ ಮಾಡದೆ ಏಕಾಏಕಿ ಸ್ಟೇ ತಂದಿದ್ದಾರೆ.
ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತಿದ್ದರಿಂದ ನಾಗಶೇಖರ್ ಜತೆ ತೆಲುಗು ಚಿತ್ರ ಮಾಡಿ ಸೋಲುಂಡಿದ್ದ ನಿರ್ಮಾಪಕರು, ಒಪ್ಪಂದದ ಪ್ರಕಾರ ನಾಗಶೇಖರ್ ನಮಗೆ ನಾಲ್ಕೂವರೆ ಕೋಟಿ ಕೊಡಬೇಕು,ಈ ಚಿತ್ರಕ್ಕೂ ಅವರೇ ನಿರ್ಮಾಪಕರು ಎಂದುಕೊಂಡು ಸ್ಟೇ ತಂದಿದ್ದರು. ಸ್ಟೇ ವೆಕೇಟ್ ಆಗುವವರೆಗೆ ನನ್ನ 2 ಸೈಟ್ ಗಳನ್ನು ಜಾಮೀನು ಮಾಡಿ ಅನುಮತಿ ತಂದಿದ್ದೇನೆ. ಮುಂದೆ 10 ದಿನ ಅಂದ್ರದಾದ್ಯಂತ ಕೋರ್ಟ್ ರಜಾ ಇದೆ. ಕೆಲವರು ಯೂ ಟ್ಯೂಬ್ ನಲ್ಲಿ ಸಹ ನಿರ್ಮಾಪಕರ ಜತೆ ಜಗಳ, ತಂತ್ರಜ್ಞರಿಗೆ ಬಾಕಿ ಕೊಟ್ಟಿಲ್ಲ ಅಂತೆಲ್ಲ ಬರೆದಿದ್ದಾರೆ. ಸತ್ಯಾಂಶ ತಿಳಿಯದೆ ಏನೇನೋ ಬರೆಯಬೇಡಿ. ಏನಿದ್ದರೂ ಸಂಬಂಧಪಟ್ಟವರನ್ನು ಸಂಪರ್ಕಿಸಿ ಎಂದು ಹೇಳಿದರು.
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ, ಎಂಎನ್ ಸಿ, ಕಾರ್ಪೊರೆಟ್ ಕಂಪನಿಗಳು ರೇಶ್ಮೆ ಬೆಳೆಯುವ ರೈತರನ್ನೆಲ್ಲ ಹೇಗೆ ತುಳಿಯುತ್ತಿದ್ದಾರೆ, ರೈತರಿಗೆ ಹೇಗೆ ಅನ್ಯಾಯವಾಗುತ್ತಿದೆ, ಇದನ್ನೆಲ್ಲ ಸಿನಿಮಾದಲ್ಲಿ ತೋರಿಸಿದ್ದಾರೆ, ನೂಲಿನ ಮಹತ್ವದ ಜತೆಗೊಂದು ಮಧುರ ಪ್ರೇಮ ಕಾವ್ಯವನ್ನು ಈ ಚಿತ್ರ ಹೇಳುತ್ತದೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಈ ಕಥೆ ಸ್ವಿಟ್‌ಝರ್ ಲ್ಯಾಂಡ್‌ವರೆಗೂ ಸಾಗುತ್ತದೆ, 60 ರಿಂದ 65 ರಷ್ಟು ಸಿನಿಮಾಕಥೆ ಸ್ವಿಟ್ಜರ್ ಲ್ಯಾಂಡ್‌ನಲ್ಲೇ ನಡೆಯುತ್ತದೆ.
ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಆಗಿ ರಚಿತಾರಾಮ್ ಅಭಿನಯಿಸಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ, ಸತ್ಯ ಹೆಗಡೆ ಅವರ ಛಾಯಾಗ್ರಹ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ವಿಶೇಷವಾಗಿ ಈ ಚಿತ್ರದಲ್ಲಿ ಚೇತನ್ ಚಂದ್ರ, ರಾಗಿಣಿ ಗೆಸ್ಟ್ ಅಪೀಯರೆನ್ಸ್ ಆಗಿ ಕಾಣಿಸಿಕೊಂಡಿದ್ದಾರೆ, ಉಳಿದಂತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.