ನವದೆಹಲಿ:ಭಾರತದಲ್ಲಿ ಸಾಂಕ್ರಾಮಿಕ ರೋಗದ ಕೋವಿಡ್ 19 ಪ್ರಸಾರವನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಇದೀಗ ದೇಶಾದ್ಯಂತ ಎಲ್ಲಾ ಚಟುವಟಿಕೆಗಳನ್ನು ಪ್ರಸ್ತುತ ಬಂದ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಅಂತರ (Social Distancing)ವನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಜನರು ತಮ್ಮ ಮನೆಯಿಂದ ಆನ್‌ಲೈನ್ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳಲು ಸೈಬರ್ ಕ್ರಿಮಿನಲ್ ಸಹ ಬಹಳ ಸಕ್ರೀಯರಾಗಿದ್ದಾರೆ. ಜನರಿಗೆ ವಂಚನೆ ಎಸಗಲು ಆನ್ಲೈನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ ಸೈಬರ್ ವನ್ಚಕರಿಗೆ ಕಡಿವಾಣ ಹಾಕಲು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.
ಕೇಂದ್ರ ಗೃಹ ಇಲಾಖೆ ಆರಂಭಿಸಿದೆ ಈ ಟ್ವಿಟ್ಟರ್ ಹ್ಯಾಂಡಲ್
ಇದಕ್ಕಾಗಿ ಕೇಂದ್ರ ಗೃಹ ಸಚಿವಾಲಯ @CyberDost ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ವೊಂದನ್ನು ಆರಂಭಿಸಿದೆ. ಈ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಆನ್ಲೈನ್ ನಲ್ಲಿ ಕೆಲಸ ಮಾಡುವಾಗ ಯಾವ ರೀತಿಯ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಂದರೆ ಯಾವ ಯಾವ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಆನ್ಲೈನ್ ವಂಚನೆಯಿಂದ ಪಾರಾಗಬಹುದು ಎಂಬುದರ ಅರಿವು ಮೂಡಿಸಲಾಗುತ್ತಿದೆ. ಈ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಕೇಂದ್ರ ಗೃಹ ಸಚಿವಾಲಯ ಸತತವಾಗಿ ಸುರಕ್ಷತೆಯ ಟಿಪ್ಸ್ ಗಳನ್ನು ಹಂಚಿಕೊಳ್ಳುತ್ತಿದೆ.
ಇಲ್ಲಿ ನಿಮ್ಮ ದೂರನ್ನು ದಾಖಲಿಸಿ
ಒಂದು ವೇಳೆ ನಿಮ್ಮ ಜೊತೆಗೂ ಕೂಡ ಯಾರಾದರು ಆನ್ಲೈನ್ ವಂಚನೆ ಎಸಗಲು ಪ್ರಯತ್ನಿಸಿದರೆ ಅಥವಾ ಸೈಬರ್ ಕ್ರೈಂಗೆ ಸಂಬಧಿಸಿದ ಇತರೆ ಯಾವುದಾದರು ದೂರು ನೀಡುವುದಾದಲ್ಲಿ, ನೀವು ನಿಮ್ಮ ದೂರನ್ನು http://cybercrime.gov.in ಗೆ ಕಳುಹಿಸಬಹುದು ಎಂದು ಹೇಳಿರುವ ಕೇಂದ್ರ ಗೃಹ ಸಚಿವಾಲಯ, ನಿಮ್ಮ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.