ಮುಡಾಗೆ ಬಿಡಿಎ ʼಕೈʼ ಕೌಂಟರ್;‌ ಸರ್ಕಾರಿ ಜಮೀನು ಸರ್ಕಾರಕ್ಕೆ ರಿಟರ್ನ್ ಗಿಫ್ಟ್ ಕೊಟ್ಟ ದಾನಶೂರ ಆರ್.ಅಶೋಕ್!

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮತ್ತು ಸಚಿವ ಹೆಚ್‌.ಕೆ. ಪಾಟೀಲ್‌ ಅವರು ವಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.

Written by - Puttaraj K Alur | Last Updated : Oct 2, 2024, 09:16 PM IST
  • ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮದ ಆರೋಪ
  • ಜಂಟಿ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್
  • BDA ಭೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್‌ ನಾಯಕರು
ಮುಡಾಗೆ ಬಿಡಿಎ ʼಕೈʼ ಕೌಂಟರ್;‌ ಸರ್ಕಾರಿ ಜಮೀನು ಸರ್ಕಾರಕ್ಕೆ ರಿಟರ್ನ್ ಗಿಫ್ಟ್ ಕೊಟ್ಟ ದಾನಶೂರ ಆರ್.ಅಶೋಕ್! title=
ಆರ್.ಅಶೋಕ್ ವಿರುದ್ಧ ಗಂಭೀರ ಆರೋಪ!

BDA vs MUDA: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೂರಾರು ಕೋಟಿ ರೂ. ಮೌಲ್ಯದ ಭೂ ಅಕ್ರಮದ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಪರಮೇಶ್ವರ್‌ ಮತ್ತು ಹೆಚ್‌.ಕೆ.ಪಾಟೀಲ್‌, ಆರ್‌.ಅಶೋಕ್ ವಿರುದ್ಧ ಆರೋಪ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿ.ಪರಮೇಶ್ವರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ. ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನಡೆದಿರುವ ನೂರಾರು ಕೋಟಿ ರೂ. ಭೂ ಹಗರಣದ ಬಗ್ಗೆ ಇಂದು ನಾವು ದಾಖಲೆ ಸಮೇತ ಮುಂದೆ ಇಡುತ್ತೇವೆ. ಸರ್ವೇ ನಂಬರ್ 10/1, 10/11 F1 ಹಾಗೂ 10/11 F2 ಜಾಗದಲ್ಲಿ 32 ಗುಂಟೆ ಜಮೀನನ್ನು 1977ರ ಫೆಬ್ರವರಿ 24ರಂದು ಬಿಡಿಎ ನೋಟಿಫಿಕೇಶನ್ ಮಾಡುತ್ತದೆ. 1977ರ ಫೆಬ್ರವರಿ 27ರಲ್ಲಿ ಮತ್ತೊಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. 1978ರ ಆಗಸ್ಟ್ 31ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರ 2003ರ ಫೆಬ್ರವರಿ 26 ಹಾಗೂ 2007ರಲ್ಲಿ ಜಮೀನಿನ ಮೂಲ ಮಾಲೀಕರಾದ ರಾಮಸ್ವಾಮಿ ಅವರಿಂದ ಆರ್.ಅಶೋಕ್ ಅವರು ಈ ಜಮೀನನ್ನು ಶುದ್ಧ ಕ್ರಯದ ಮೂಲಕ ಖರೀದಿ ಮಾಡುತ್ತಾರೆ.

ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ಕೂಡಲೇ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಕಡತ ಮಂಡನೆಯಾದ ಎರಡು ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗುತ್ತದೆ. ಡಿ-ನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ.ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್.ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 2011ರ ಆಗಸ್ಟ್ 27ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ. ನಂತರ ಹೈಕೋರ್ಟ್ ಮೆಟ್ಟಿಲೇರಿ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಈ ಭೂಮಿಯು ಬಿಡಿಎ ಅಧೀನದಲ್ಲಿರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲವೆಂದು ತೀರ್ಪಿನಲ್ಲಿ ತಿಳಿಸಲಾಗುತ್ತದೆ. ಸಿದ್ದರಾಮಯ್ಯರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದಕ್ಕೆ ನೀವು ಆಡುತ್ತಿರುವ ಮಾತುಗಳು ಹಾಗೂ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ? ಇದರ ಬಗ್ಗೆ ಜನರಿಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಖಾಕಿ ವಿರುದ್ದ ಗರಂ ಆದ ಪರಿಷತ್‌ ಸದಸ್ಯ ಪ್ರಕಾಶ್‌ ಹುಕ್ಕೇರಿ

ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಆರ್.ಅಶೋಕ್ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಬಿಡಿಎಗೆ ವಾಪಸ್ ನೀಡಿರುವವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ. ನೀವು ಮಾಡಿದ್ದು ಸರಿಯಾದರೆ, ಪಾರ್ವತಮ್ಮ ಅವರು ಮಾಡಿದ್ದರಲ್ಲಿ ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ತಪ್ಪು ಹೇರಿ, ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಹಿಂಪಡೆಯುತ್ತೀರಿ, ಮುಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದ ಸೈಟುಗಳನ್ನು ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಾ?ʼ ಎಂದು ಪ್ರಶ್ನಿಸಿದ್ದಾರೆ. 

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ʼಈ ಜಾಗ ಡಾಲರ್ಸ್ ಕಾಲೋನಿ 2ನೆ ಹಂತದ RMV ಬಡಾವಣೆ ಹಾಗೂ ವರ್ತುಲ ರಸ್ತೆ ಬಳಿ ಇದೆ. ಈ ಪ್ರದೇಶವನ್ನು ಬಿಡಿಎ 1977 ಹಾಗೂ 1978ರಲ್ಲಿ ವಶಕ್ಕೆ ಪಡೆದಿತ್ತು. ಈ ಜಾಗ ವರ್ತುಲ ರಸ್ತೆಗೆ ಮುಖವಾಗಿದೆ. ಹೀಗಾಗಿ ಈ ಜಮೀನಿನ ಮೌಲ್ಯ ಕೋಟ್ಯಂತರ ರೂಪಾಯಿಯಾಗಿದೆ. 2003ರಲ್ಲಿ ಆರ್.ಅಶೋಕ್ ಅವರು ಶುದ್ಧ ಕ್ರಯ ಹೇಗೆ ಮಾಡಿಕೊಂಡರು? ಇಷ್ಟು ದಿನ ಅಕ್ರಮವಾಗಿ ಜಿಪಿಎ ಮಾಡಿಕೊಂಡಿರುವುದನ್ನು ಕೇಳಿದ್ದೆ, ಆದರೆ ಮೊದಲ ಬಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಶುದ್ಧ ಕ್ರಯ ಮಾಡಿಕೊಂಡಿರುವ ಪ್ರಕರಣ ನೋಡುತ್ತಿದ್ದೇನೆ. ಬಿಡಿಎ ಸ್ವತ್ತನ್ನು ಖಾಸಗಿ ಅವರಿಂದ ಹೇಗೆ ಖರೀದಿ ಮಾಡಿದರು? ಬಿಡಿಎ ಬಳಿ ಖಾತಾ ಇರುವಾಗ ಗುಳ್ಳಮ್ಮ ಅವರ ವಾರಸುದಾರರಿಂದ ಹೇಗೆ ಖರೀದಿ ಮಾಡಿದರು?ʼ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮಸ್ವಾಮಿ ಬಿನ್ ವೆಂಕಟಪ್ಪ ಎಂಬುವಬರ ಹೆಸರಲ್ಲಿ ಡಿ-ನೋಟಿಫಿಕೇಷನ್ ಮಾಡಬೇಕು ಎಂದು ಅರ್ಜಿ ನೀಡುತ್ತಾರೆ. 2009ರ ನವೆಂಬರ್‌ 18ರಂದು ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಡಿಎ ಆಯುಕ್ತರು ಕೂಡಲೇ ಕಡತದಲ್ಲಿ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಅದೇ ವರ್ಷ ಡಿಸೆಂಬರ್ 31ಕ್ಕೆ ಅಂದರೆ ಒಂದು ತಿಂಗಳು 12 ದಿನಗಳ ಅಂತರದಲ್ಲಿ ಡಿ-ನೋಟಿಫಿಕೇಷನ್ ಮಾಡುತ್ತಾರೆ. ಸರ್ಕಾರಿ ಜಾಗವನ್ನು 23 ವರ್ಷಗಳ ನಂತರ ಡಿ-ನೋಟಿಫಿಕೇಷನ್ ಮಾಡಿರುವುದು ಅಕ್ರಮ ಅಲ್ಲವೇ? ಶುದ್ಧ ಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬುವವರ ವಾರಸುದಾರರು ಯಾರು ಎಂದು ನೋಡಿದರೆ, ವಾರಸುದಾರರು ಜಿ.ಶಾಮಣ್ಣ, ಜಿ.ಮುನಿರಾಜು, ಜಿ.ಗೋವಿಂದಪ್ಪ, ಜಿ.ಕಾಂತರಾಜು, ಜಿ.ಸುಬ್ರಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬುವವರಿಗೆ ಗುಳ್ಳಮ್ಮ ಎಂಬುವವರು ಹೇಗೆ ಸಂಬಂಧ ಎಂದು ಗೊತ್ತಿಲ್ಲವೆಂದು ಹೇಳಿದ್ದಾರೆ. 

ಇದನ್ನೂ ಓದಿ: ಸಿಎಂ ಭಂಡತನ ಅವರಿಗೇ ಕಂಟಕವಾಗಲಿದೆ : ಬಿ.ವೈ. ವಿಜಯೇಂದ್ರ

ನನ್ನ ಪ್ರಕಾರ ರಾಮಸ್ವಾಮಿ ದಾರಿಯಲ್ಲಿ ಹೋಗುವ ದಾಸಯ್ಯ ಎಂದು ನನಗೆ ಮೇಲ್ನೋಟಕ್ಕೆ ಕಾಣುತ್ತಿದೆ. ದಾರಿಯಲ್ಲಿ ಹೋಗುವವರಿಂದ ಅರ್ಜಿ ಪಡೆದು ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಡಿ-ನೋಟಿಫಿಕೇಷನ್ ಮಾಡುತ್ತೀರಿ. ಈ ಬೇನಾಮಿ ರಾಮಸ್ವಾಮಿ ಎಲ್ಲಿಂದ ಬಂದ? ಅಲ್ಲಿಗೆ ಮೂಲ ವಾರಸುದಾರರು ಡಿ-ನೋಟಿಫಿಕೇಷನ್‌ಗೆ ಅರ್ಜಿಯನ್ನೇ ಕೊಟ್ಟಿಲ್ಲ. ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬುವವರನ್ನು ಸೃಷ್ಟಿ ಮಾಡಲಾಗಿದೆ. ಇದು ಕ್ರಮವೇ? ಅಕ್ರಮವೇ? ಅಂತಿಮವಾಗಿ ಡಿ-ನೋಟಿಫಿಕೇಷನ್ ಆಗಿದ್ದು ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರಿಗೆ. ಈ ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರು ಯಾರು? ಇನ್ನು ಅಂತಿಮವಾಗಿ ಖಾತೆ ಆಗುವುದು ಆರ್.ಅಶೋಕ್ ಅವರ ಹೆಸರಿಗೆ. ಹೆಜ್ಜೆ ಹೆಜ್ಜೆಗೂ ಅಕ್ರಮ ಮಾಡಿರುವ ಅಶೋಕ್ ಅವರು ಇಂದು ಆಡುತ್ತಿರುವ ಮಾತುಗಳು ನೋಡಿದರೆ ಅಚ್ಚರಿಯಾಗುತ್ತದೆ. ಯಾವುದೇ ತಪ್ಪು ಮಾಡಿಲ್ಲದಿದ್ದರೂ ಸಿದ್ದರಾಮಯ್ಯರ ರಾಜೀನಾಮೆ ಕೇಳಿ, ಬಿಜೆಪಿಯ ಅಸ್ತ್ರದಂತೆ ಇರುವ ಇಡಿ ಸಂಸ್ಥೆಯನ್ನು ಪ್ರಯೋಗಿಸುತ್ತಾರೆ. ಹೀಗಾಗಿ ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ್ ಅವರು ವಿಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News