ನವದೆಹಲಿ:ನಿರ್ಭಯಾ ಪ್ರಕರಣ ಮತ್ತೋರ್ವ ದೋಷಿ ವಿನಯ್ ಶರ್ಮಾಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಭಾರಿ ಪೆಟ್ಟು ನೀಡಿದೆ. ಜಸ್ಟಿಸ್ ಆರ್. ಭಾನುಮತಿ ನೇತೃತ್ವದ ಪೀಠ ದೋಷಿ ವಿನಯ್ ಶರ್ಮಾ ದಾಖಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ರಾಷ್ಟ್ರಪತಿವತಿಯಿಂದ ದಯಾ ಅರ್ಜಿ ತಿರಸ್ಕೃತಗೊಂಡ ಬಳಿಕ ಅದನ್ನು ವಿನಯ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದ. ಸುಪ್ರೀಂನಲ್ಲಿ ಅರ್ಜಿ ದಾಖಲಿಸಿದ್ದ ದೋಷಿ ವಿನಯ್, ತಮ್ಮ ಪ್ರಕರಣದಲ್ಲಿ ರಾಜಕೀಯ ನಡೆದಿದ್ದು, ರಾಷ್ಟ್ರಪತಿಗಳ ಬಳಿ ಕಳುಹಿಸಲಾಗಿರುವ ಶಿಫಾರಸ್ಸಿನಲ್ಲಿ ಪಕ್ಷಪಾತ ನಡೆದಿದೆ ಮತ್ತು ಶಿಫಾರಸ್ಸು ಪೂರ್ವಾಗ್ರಹ ಪೀಡಿತವಾಗಿದೆ ಎಂದಿದ್ದ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ದೋಷಿ ಮುಕೇಶ್ ಅರ್ಜಿಯನ್ನು ಕೂಡ ತಿರಸ್ಕರಿಸಿತ್ತು. ಜೊತೆಗೆ ಜಸ್ಟಿಸ್ ಆರ್. ಭಾನುಮತಿ ಅವರ ಅಧ್ಯಕ್ಷತೆಯಲ್ಲಿನ ಮೂವರು ನ್ಯಾಯಮೂರ್ತಿಗಳ ಪೀಠ ರಾಷ್ಟ್ರಪತಿಗಳು ದೋಷಿಗಳ ದಯಾ ಅರ್ಜಿಯನ್ನು ತಿರಸ್ಕರಿಸಿರುವುದರ ಮೇಲೆ ತನ್ನ ಮುದ್ರೆ ಒತ್ತಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದ ಮುಕೇಶ್ ರಾಷ್ಟ್ರಪತಿಗಳ ನಿರ್ಣಯವನ್ನು ಪ್ರಶ್ನಿಸಿದ್ದ. ತನ್ನ ಅರ್ಜಿಯಲ್ಲಿ ಆತ ಫೆಬ್ರುವರಿ 1ರ ಡೆತ್ ವಾರೆಂಟ್ ಮೇಲೂ ಕೂಡ ತಡೆ ವಿಧಿಸಬೇಕು ಎಂದು ಆತ ಕೋರಿದ್ದ.
ನಂತರ ನಿರ್ಭಯಾ ದೋಷಿಗಳಿಗೆ ಬೇರೆ ಬೇರೆಯಾಗಿ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿ ಕೇಂದ್ರ ಸರ್ಕಾರ ದಾಖಲಿಸಿದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ನಾಲ್ವರು ದೋಷಿಗಳಿಗೆ ನೋಟಿಸ್ ಜಾರಿಗೊಳಿಸಿ ಉತ್ತರ ನೀಡುವಂತೆ ಸೂಚಿಸಿತ್ತು. ಈ ವೇಳೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ದಾಖಲಿಸಿತ್ತು. ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಎಲ್ಲ ನಾಲ್ವರು ದೋಷಿಗಳಿಗೆ ಬೇರೆ ಬೇರೆಯಾಗಿ ಗಲ್ಲು ಶಿಕ್ಷೆ ನೀಡುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದ ಇತ್ಯರ್ಥದಲ್ಲಿ ದೋಷಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದಿದ್ದರು.