ನವದೆಹಲಿ: ದೆಹಲಿಯ ಜಾಮಿಯಾ ಪರಿಸರದಲ್ಲಿ ಗುಂಡು ಹಾರಿಸಿದ ಅಪ್ರಾಪ್ತ ಬಾಲಕ ರೂ.10,000 ನೀಡಿ ನಾಡ ಪಿಸ್ತೂಲ್ ಖರೀದಿಸಿದ್ದ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಈ ಯುವಕ ಅಜೀತ್ ಹೆಸರಿನ ವ್ಯಕ್ತಿ ಬಳಿಯಿಂದ ನಾಡ ಪಿಸ್ತೂಲ್ ಖರೀದಿಸಿದ್ದ ಎಂದು ಹೇಳಿದ್ದಾರೆ. ಸದ್ಯ ಅಜೀತ್ ನನ್ನು ಬಂಧಿಸಿರುವ ದೆಹಲಿ ಕ್ರೈಂ ಬ್ರಾಂಚ್ ನ ವಿಶೇಷ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದೆ. ವೃತ್ತಿಯಲ್ಲಿ ಅಜೀತ್ ಓರ್ವ ರೆಸ್ಲರ್ ಆಗಿದ್ದಾನೆ. ಯುವಕ ಅಜೀತ್ ಬಳಿಯಿಂದ 10 ಸಾವಿರ ರೂ.ಗಳನ್ನು ನೀಡಿ ನಾಡ ಪಿಸ್ತೂಲ್ ಖರೀದಿಸಿ, CAA ಕಾಯ್ದೆಯನ್ನು ವಿರೋಧಿಸಿ ಗುರುವಾರ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿ ಪರಿಸರದಲ್ಲಿ ನಡೆದ ಮಾರ್ಚ್ ವೇಳೆ ಗುಂಡು ಹಾರಿಸಿದ್ದ. ಬಳಿಕ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಈ ವೇಳೆ 'ಜೈ ಶ್ರೀರಾಮ್' ಘೋಷಣೆಯನ್ನು ಕೂಗಿದ್ದ ಯುವಕ 'ಬನ್ನಿ ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ' ಎಂದು ಹೇಳಿ ಗುಂಡು ಹಾರಿಸಿದ್ದ. ಆತ ಹಾರಿಸಿದ್ದ ಗುಂಡಿಗೆ ಓರ್ವ ಯುವಕ ಗಾಯಗೊಂಡಿದ್ದ. ಈ ಯುವಕ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ. ಬಳಿಕ ಗುಂಡು ಹಾರಿಸಿದ್ದ ಯುವಕನನ್ನು ಬಂಧಿಸಿದ್ದ ಪೊಲೀಸರು ಆತನನ್ನು ಮಕ್ಕಳ ಸುಧಾರಣಾ ಗೃಹಕ್ಕೆ ಕಳುಹಿಸಿದ್ದರು.
ಆರೋಪಿಯ ವಯಸ್ಸನು ಖಾತರಿಪಡಿಸಲು ಕ್ರೈಂ ಬ್ರಾಂಚ್ ಪೊಲೀಸರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಅರ್ಜಿ ದಾಖಲಿಸಿದ್ದಾರೆ. ಬಳಿಕ ಮೆಡಿಕಲ್ ಬೋರ್ಡ್ ರಚಿಸಲಾಗುವುದು. ಈ ವೈದ್ಯಕೀಯ ಮಂಡಳಿ ಅನುಮತಿ ನೀಡಿದ ಬಳಿಕ ಬೊನ್ ಆಸಿಫಿಕೆಶನ್ ಟೆಸ್ಟ್ ನಡೆಸಲಾಗುವುದು.
ಆರೋಪಿಯ ವಿರುದ್ಧ ಹತ್ಯೆಗೆ ಪ್ರಯತ್ನ ಮತ್ತು ಶಸ್ತ್ರಾಸ್ತ್ರ ಹೊಂದಿದ ಆರೋಪದಡಿ FIR ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಯ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಪೊಲೀಸರು ತಡರಾತ್ರಿ ಆರೋಪಿಯನ್ನು ಬಂಧಿಸಿದ್ದರು
ದೆಹಲಿ ಪೊಲೀಸ್ ಮುಖ್ಯ ಕಚೇರಿ ಮೂಲಗಳ ಪ್ರಕಾರ, ಸದ್ಯ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಠಾಣಾ ಪೊಲೀಸರು ಆರೋಪಿಗೆ ಯಾವುದೇ ರೀತಿಯ ವಿಚಾರಣೆ ನಡೆಸುವಂತಿಲ್ಲ. ಆದರೆ, ಪ್ರಕರಣ ಅಧಿಕೃತವಾಗಿ ಹಸ್ತಾಂತರಿಸುವ ಮುನ್ನವೇ ಕ್ರೈಂ ಬ್ರಾಂಚ್ ಘಟನಾ ಸ್ಥಳಕ್ಕೆ ತಲುಪಿದ್ದರು. ಈ ಹಸ್ತಾಂತರ ಪ್ರಕ್ರಿಯೆ ಕೂಡ ತಡರಾತ್ರಿ ನಡೆದಿತ್ತು.