ಮಂಗಳೂರು : ಮಂಗಳೂರು ಹೊರವಲಯದ ಕಾಟಿಪಳ್ಳ ಎಂಬಲ್ಲಿ ಹಾಡುಹಗಲೇ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.
ಇಂದು ಬೆಳಿಗ್ಗೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ದೀಪಕ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ಇನ್ನು, ಬಿಜೆಪಿ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ಯೆಗೈದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಜೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ಕಮಿಷನರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಸುರತ್ಕಲ್ ಮತ್ತು ಕಾಟಿಪಳ್ಳದಲ್ಲಿ ಸ್ವಯಂ ಘೋಷಿತ ಬಂದ್ ಘೋಷಣೆಯಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅದೆಯಲು ಬಿಗಿ ಪೋಲಿಸ್ ಭದ್ರತೆ ನಿಯೋಜಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್, ಈ ಹತ್ಯೆ ಪ್ರಕರಣವನ್ನು ಎನ್ಐಎ ಗೆ ವಹಿಸುವಂತೆ ಆಗ್ರಹಿಸಿದ್ದಾರೆ.
"ಇವತ್ತು ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಸರ್ಕಾರದ ತುಷ್ಠಿಕರಣದಿಂದ ಅಮಾಯಕ ಹಿಂದೂ ಯುವಕನ ಹತ್ಯೆಯಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಣ್ಣುಮುಚ್ಚಿ ಕೂತಿದೆ. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು. ರಾಜ್ಯ ಸರ್ಕಾರದ ತನಿಖೆಯಲ್ಲಿ ನಂಬಿಕೆಯಿಲ್ಲ. ಈ ಕೊಲೆ ಹಿಂದೆ ಭಯೋತ್ಪಾದನೆ ಸಂಘಟನೆಗಳ ಶಂಕೆಯಿದೆ. ದೀಪಕ್ ಕುಟುಂಬಕ್ಕೆ ಕೂಡಲೇ 50 ಲಕ್ಷ ರೂ. ಪರಿಹಾರ ನೀಡಬೇಕು" ಎಂದು ದೆಹಲಿಯಲ್ಲಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
"ಇಂದು ಮಧ್ಯಾಹ್ನ 1.30 ರ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊಬೈಲ್ ಸಿಮ್ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ ದೀಪಕ್ ನನ್ನು ಹತ್ಯೆ ಮಾಡಿದ್ದಾರೆ. ದೀಪಕ್ ಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ" ಎಂದು ಮಂಗಳೂರು ಪೋಲಿಸ್ ಆಯುಕ್ತ ಟಿ.ಕೆ.ಸುರೇಶ್ ಹೇಳಿದ್ದಾರೆ.