ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ದಂಪತಿ ಕುಟುಂಬದಲ್ಲಿ ಮತ್ತೊಮ್ಮೆ ಸಂತಸ ಮನೆ ಮಾಡಿದೆ. ಹೌದು, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೊಮ್ಮೆ ತಾಯಿಯಾಗಿದ್ದ ರಾಧಿಕಾ ಪಂಡಿತ್ ಅವರು ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿರುವುದು ಈ ಸಂತಸಕ್ಕೆ ಕಾರಣವಾಗಿದೆ.
ಹೆರಿಗೆ ನೋವಿನಿಂದ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ರಾಧಿಕಾ ಪಂಡಿತ್, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ತಾರಾ ದಂಪತಿ ಮನೆಗೆ ಜೂನಿಯರ್ ರಾಕಿಂಗ್ ಸ್ಟಾರ್ ಆಗಮನವಾದಂತಾಗಿದೆ. 2018 ಡಿಸಂಬರ್ 2 ರಂದು ಮಗಳು ಐರಾ ಜನಿಸಿದ್ದಳು. ಅಲ್ಲಿಂದ ಒಂಭತ್ತು ತಿಂಗಳೊಳಗಾಗಿ ಯಶ್ ಮನೆಗೆ ಮತ್ತೊಂದು ಮಗುವಿನ ಆಗಮನವಾಗಿದೆ.
ರಾಧಿಕಾ ಮತ್ತೆ ತಾಯಿಯಾಗುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಇಂದು ಬೆಳಿಗ್ಗೆ ಹೆರಿಗೆಯಾಗಿದೆ. ಇದೀಗ ಯಶ್ ದಂಪತಿ ಎರಡನೇ ಮಗುವಿಗೆ ಯಾವ ಹೆಸರು ಇಡಲಿದ್ದಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.