ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಪತನದ ವಿಷಯವಾಗಿ ಕಳೆದ ವಾರ ಟ್ವೀಟ್ ವಾರ್ ಮೂಲಕ ಗಮನಸೆಳೆದಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಈಗ ಜಾತ್ಯಾತೀತ ಮತ್ತು ಜಾತಿ ರಾಜಕಾರಣದ ವಿಷಯ ಪ್ರಸ್ತಾಪಿಸಿ ಸುದ್ದಿಯಾಗಿದ್ದಾರೆ.
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಒಂದು ಕಡೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಾತಿನ ಓಘ ದಿನದಿಂದ ದಿನಕ್ಕೆ ಬಿರುಸಾಗುತ್ತಿದ್ದರೆ ಇನ್ನೊಂದೆಡೆ ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಅವರ ಸ್ನೇಹ 'ಇದು ನೈಜವೋ-ನಾಟಕವೋ' ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
ತಾನು ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂದು ಪದೇ ಪದೇ ಎದೆಯುಬ್ಬಿಸಿ ಹೇಳಿಕೊಳ್ಳುವ ಮತ್ತು ಹಿಂದೊಮ್ಮೆ 'ತಾನು ಕಾಂಗ್ರೆಸ್ ಕಚೇರಿಯ ಕಸ ಗುಡಿಸಲಿಕ್ಕೂ ಸಿದ್ದ' ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಮೊನ್ನೆ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಕಚೇರಿಗೆ ಬರುವಾಗ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಸ್ವಾಗತಿಸಿದ್ದರು. ಆಗ ಡಿ.ಕೆ. ಶಿವಕುಮಾರ್ ಜೆಡಿಎಸ್ ಭಾವುಟವನ್ನು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು. ಸಹಜವಾಗಿ ಇದು ಚರ್ಚೆ ಮತ್ತು ಟೀಕೆಗಳನ್ನು ಹುಟ್ಟುಹಾಕಿತ್ತು. ಕೆಲವರು ಡಿ.ಕೆ. ಶಿವಕುಮಾರ್ ಪಕ್ಷ ನಿಷ್ಠೆಯನ್ನೂ ಪ್ರಶ್ನಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಖಾಸಗಿಯಾಗಿ ಮಾತನಾಡುತ್ತಾ 'ಡಿ.ಕೆ. ಶಿವಕುಮಾರ್ ಜೆಡಿಎಸ್ ಭಾವುಟ ಹಿಡಿದುಕೊಂಡು ಯಾವ ಸಂದೇಶ ನೀಡುತ್ತಾರೆ?' ಎಂದು ಹೇಳಿದ್ದರು.
ಈ ಖಾಸಗಿ ಮಾತುಕತೆಯ ವಿಡಿಯೋ ವೈರೆಲ್ ಆಗುವುದರ ಜೊತೆಜೊತೆಗೆ ಕುಮಾರಸ್ವಾಮಿ ಅವರು 'ತಾನು ಬಿ.ಎಸ್. ಯಡಿಯೂರಪ್ಪ ಸರ್ಕಾರ ಬೀಳಲು ಬಿಡುವುದಿಲ್ಲ' ಎಂದು ಪರೋಕ್ಷವಾಗಿ ಬಿಜೆಪಿ ಬೆಂಬಲ ಘೋಷಿಸಿದರು. ಈ ಬೆಳವಣಿಗೆಗಳಿಂದಾಗಿ ಕುಮಾರಸ್ವಾಮಿ ಮೇಲ್ವರ್ಗದ ಲಿಂಗಾಯಿತರ ಒಲೈಕೆಗಾಗಿ ಹೀಗೆ ಮಾತನಾಡಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಪ್ರಾಮುಖ್ಯತೆ ನೀಡಿದರೆ ನಮ್ಮ ನಡೆ ಬಿಜೆಪಿ ಕಡೆ ಎಂಬ ಸಂದೇಶವನ್ನು ಕಾಂಗ್ರೆಸ್ ಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಜೆಡಿಎಸ್ ಭಾವುಟ ಹಿಡಿದುಕೊಂಡಿದ್ದನ್ನು ಖಾಸಗಿಯಾಗಿ ಖಂಡಿಸಿದ್ದ ಸಿದ್ದರಾಮಯ್ಯ ಅವರ ನಡೆಯನ್ನು ಕುಮಾರಸ್ವಾಮಿ ಬಹಿರಂಗವಾಗಿ ಖಂಡಿಸಿದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈಗ ತಾನು ಜಾತ್ಯತೀತ ತತ್ವಕ್ಕೆ ಬದ್ದ, ನನ್ನದು ಅಂಬೇಡ್ಕರ್, ಬುದ್ದ, ಬಸವ, ಕುವೆಂಪು ಅವರ ಸಿದ್ದಾಂತ. ಅವರ ಯೋಚನೆಯನ್ನು ನನ್ನ ಅಧಿಕಾರದ ಅವಧಿಯಲ್ಲಿ ಯೋಜನೆಗಳನ್ನಾಗಿ ರೂಪಿಸಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಸಿದ್ದ ಎಂಬ ಸವಾಲೆಸೆದಿದ್ದಾರೆ. ಆ ಮೂಲಕ ಕುಮಾರಸ್ವಾಮಿ ಅವರಿಗೆ ಯಾವ ಸಿದ್ದಾಂತವೂ ಇಲ್ಲ. ಅವರ ಅಧಿಕಾರವಧಿಯಲ್ಲಿ ಯಾವ ಘನಂದಾರಿ ಕೆಲಸ ಮಾಡಿಲ್ಲ ಎಂದು ಚುಚ್ಚಿದ್ದಾರೆ.
ಇವೆಲ್ಲವನ್ನೂ ನೋಡುತ್ತಿದ್ದರೆ ಸದ್ಯಕ್ಕೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಶೀತಲಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಿಲ್ಲುವುದಕ್ಕೆ 'ಮೂಲ ಕಾಂಗ್ರೆಸಿಗರು' ಬಿಡುವ ಸಾದ್ಯತೆಗಳು ಇಲ್ಲ. ಏಕೆಂದರೆ ಸಿದ್ದರಾಮಯ್ಯ ಅವರ ಖಾಸಗಿ ಮಾತನ್ನು ವಿಡೀಯೋ ಮಾಡಿ ಬಿಟ್ಟವರೇ 'ಮೂಲ ಕಾಂಗ್ರೆಸಿಗರು'!