ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿ ಪಕ್ಷದ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.
ನಗರದ ಜೋಗುಪಾಳ್ಯ ಕಾರ್ಪೊರೇಟರ್ ಆಗಿರುವ ಗೌತಮ್ ಕುಮಾರ್ ಅವರನ್ನು ಮೇಯರ್ ಆಗಿ, ಹಾಗೂ ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್ ಕಾರ್ಪೊರೇಟರ್ ಬಿಜೆಪಿಯ ರಾಮ್ ಮೋಹನ್ ಆಯ್ಕೆಯಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಕೇಂಪೇಗೌಡ ಪೌರ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಗೌತಮ್ ಕುಮಾರ್ ಮತ್ತು ಪದ್ಮನಾಭರೆಡ್ಡಿ ಇಬ್ಬರೂ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮವಾಗಿ ಪದ್ಮನಾಭ ರೆಡ್ಡಿ ನಾಮಪತ್ರ ವಾಪಸ್ ಪಡೆದರು.
ಇನ್ನು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಸತ್ಯನಾರಾಯಣ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನ ಗಂಗಮ್ಮ ಕಣದಲ್ಲಿದ್ದರು. ಮೇಯರ್ ಸ್ಥಾನದ ಅಭ್ಯರ್ಥಿಗಳಾದ ಗೌತಮ್ ಕುಮಾರ್ ಪರವಾಗಿ 129 ಮತಗಳು ಬಿದ್ದರೆ, ವಿರುದ್ಧವಾಗಿ 110 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಪರವಾಗಿ 112 ಮತ ಪಡೆದು ಸೋಲನುಭವಿಸಿದರು. ಅಂತೆಯೇ ಉಪಮೇಯರ್ ಸ್ಥಾನಕ್ಕೆ ಬೊಮ್ಮನಹಳ್ಳಿ ವಾರ್ಡ್ ಕಾರ್ಪೊರೇಟರ್ ಬಿಜೆಪಿಯ ರಾಮ್ ಮೋಹನ್ ಆಯ್ಕೆಯಾಗಿದ್ದಾರೆ.
ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಜೈನ್ ಹಾಗೂ ಉಪ ಮೇಯರ್ ಆಗಿ ರಾಮ್ ಮೋಹನ್ ಆಯ್ಕೆಯಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ.