ನವದೆಹಲಿ: ಶನಿವಾರದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಿಹಾರದ ಮುಜಾಫರ್ಪುರ್ ಜಿಲ್ಲೆ ಕೋರ್ಟ್ ನಲ್ಲಿ ಭಾರತದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮತ್ತು ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭಾಷಣವನ್ನು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ. ಸುದ್ದಿಮೂಲಗಳ ಪ್ರಕಾರ ಸುಧೀರ್ ಕುಮಾರ್ ಓಜಾ ಎನ್ನುವ ಸ್ಥಳೀಯ ವಕೀಲ ಇಮ್ರಾನ್ ಖಾನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.ಮುಜಫರ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ.ತನ್ನ ದೂರಿನ ಆಧಾರದ ಮೇಲೆ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡುವಂತೆ ದೂರುದಾರ ನ್ಯಾಯಾಲಯಕ್ಕೆ ಕೋರಿದ್ದಾರೆ.
370 ನೇ ವಿಧಿಯನ್ನು ರದ್ದುಪಡಿಸುವುದನ್ನು ಉಲ್ಲೇಖಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಮಾಡಿದ ಹೇಳಿಕೆಗಳು ಕೇವಲ ಒಂದು ಭಾಗದ ಜನರನ್ನು ಪ್ರಚೋದಿಸುತ್ತದೆ ಮತ್ತು ದೇಶದಲ್ಲಿ ಶಾಂತಿಗೆ ಭಂಗ ತರುತ್ತದೆ ಎಂದು ಓಜಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.