ಅಮೃತಸರ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಶಿರೋಮಣಿ ಅಕಾಲಿ ದಳ (ಎಸ್ಎಡಿ) ನಿರ್ಧರಿಸಿದೆ. ರಾಮದಾಸ್ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ನಡೆದ ಪಕ್ಷದ ಪ್ರಮುಖ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹರಿಯಾಣದ ಶಿರೋಮಣಿ ಅಕಾಲಿ ದಳ ಪಕ್ಷದ ಏಕೈಕ ಶಾಸಕ ಬಿಜೆಪಿಗೆ ಸೇರ್ಪಡೆಯಾದ ಒಂದು ದಿನದ ನಂತರ ಅಕಾಲಿ ದಳದ ನಿರ್ಧಾರ ಹೊರಬಂದಿದೆ.
ಪಕ್ಷದ ಏಕೈಕ ಶಾಸಕ ಬಾಲಕೋರ್ ಸಿಂಗ್ ಅವರನ್ನು ಹರಿಯಾಣದಲ್ಲಿ ಬಿಜೆಪಿಗೆ ಸೇರಿಸಿಕೊಳ್ಳುವುದು ಮೈತ್ರಿ ಧರ್ಮದ ಉಲ್ಲಂಘನೆ ಎಂದು ಸಭೆಯಲ್ಲಿ ಅಕಾಲಿ ದಳದ ಮುಖಂಡರು ಹೇಳಿದ್ದಾರೆ. ಗುರುವಾರ, ಬಾಲ್ಕೋರ್ ಸಿಂಗ್ ಅವರು ಮಾಜಿ ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ ದತ್ ಮತ್ತು ಭಾರತದ ಮಾಜಿ ಪುರುಷರ ಹಾಕಿ ನಾಯಕ ಸಂದೀಪ್ ಸಿಂಗ್ ಅವರೊಂದಿಗೆ ಬಿಜೆಪಿಗೆ ಸೇರಿದರು.
ಮತ್ತೊಂದೆಡೆ, ಶಿರೋಮಣಿ ಅಕಾಲಿ ದಳ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸೋಮವಾರ (ಸೆಪ್ಟೆಂಬರ್ 23), ಶಿರೋಮಣಿ ಅಕಾಲಿ ದಳದ ಮುಖಂಡರು ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಟರ್ಲಿಂಗ್ ರೆಸಾರ್ಟ್ ನಲ್ಲಿ ಮಹತ್ವದ ಸಭೆ ನಡೆಸಿದರು.
ಬಲ್ವಿಂದರ್ ಸಿಂಗ್ ಭುಂದಾದ್ ರಚಿಸಿದ ಐದು ಸದಸ್ಯರ ಸ್ಕ್ರೀನಿಂಗ್ ಸಮಿತಿಯು ವಿಧಾನಸಭೆಯಿಂದ 35 ಅಭ್ಯರ್ಥಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದು, ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಅಕ್ಟೋಬರ್ 21 ರಂದು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.