ಮುಂಬೈ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಇತ್ತೀಚಿನ ಕ್ರಮವನ್ನು ಬೆಂಬಲಿಸಿದ ಶಿವಸೇನೆ ನಾಯಕ ಸಂಜಯ್ ರಾವತ್, 2022ರ ವೇಳೆಗೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ ಭಾರತಕ್ಕೆ ಸಂಪೂರ್ಣವಾಗಿ ಸೇರಲ್ಪಡಲಿದೆ ಎಂದರು.
''ಕಾಶ್ಮೀರ ನಮ್ಮ ಆಂತರಿಕ ವಿಷಯ ಎಂದು ಪ್ರಧಾನಿ ಮೋದಿ ಅವರು ಈಗಾಗಲೇ ಟ್ರಂಪ್ ಗೆ ಸ್ಪಷ್ಟವಾಗಿ ಹೇಳಿದ್ದಾರೆ... ಪಾಕ್ ಪ್ರಧಾನಿ ಇಮ್ರಾನ್ ಅವರ ಬಾಡಿ ಲಾಂಗ್ವೇಜ್ನ ನೀವು ನೋಡಿದ್ದೀರಾ ... ಭಾರತ ಇಡೀ ಕಾಶ್ಮೀರವನ್ನು ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ... 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಪಿಒಕೆ ಶೀಘ್ರದಲ್ಲೇ ಭಾರತದ ಭಾಗವಾಗಲಿದೆ... ಪಾಕಿಸ್ತಾನ ಸಹ ಈಗ ಅದನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದೆ... 2022ರ ವೇಳೆಗೆ ಅಖಂಡ ಭಾರತದ ಕನಸು ಈಡೇರಲಿದೆ" ಎಂದು ರಾವತ್ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ಪಿಒಕೆ ಭಾರತದ ಭಾಗವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.
370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರಕ್ಕೆ ಈ ಹಿಂದೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬೆಂಬಲ ವ್ಯಕ್ತಪಡಿಸಿತ್ತು.