ಬೆಳಗಾವಿ: ಬಹುದಿನಗಳ ನಿರೀಕ್ಷಿತ ಬೆಳಗಾವಿ-ಬೆಂಗಳೂರು ನಡುವಿನ ವಿಮಾನಯಾನ ಸೇವೆ ಭಾನುವಾರ(ಸೆಪ್ಟೆಂಬರ್ 13)ದಿಂದ ಆರಂಭಗೊಂಡಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಆರಂಭಿಸಿದ್ದು, ಕೇಂದ್ರೆ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ವಿಮಾನಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ ಅಂಗಡಿ, ಈ ಭಾಗದ ಜನರ ಬಹುದಿನಗಳ ಅಪೇಕ್ಷೆಯಂತೆ ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಸೇವೆಯನ್ನು ಪ್ರಾರಂಭಿಸಿದೆ. ಇಂಡಿಗೊ ವಿಮಾನ ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಸಂಚರಿಸಲಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ ವಿಮಾನ ಸೇವೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೊರೆ, ಶಾಸಕಿ ಲಕ್ಷ್ಮೀ ಹೆಬ್ಳಾಕರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.