ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಐಎನ್ಎಕ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಇದರೊಂದಿಗೆ ವಿಚಾರಣೆಗಾಗಿ ಚಿದಂಬರಂ ಅವರನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಇಡಿಯ ಮನವಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಚಿದಂಬರಂ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.
"ಆರಂಭಿಕ ಹಂತದಲ್ಲಿ ಜಾಮೀನು ನೀಡುವುದರಿಂದ ತನಿಖೆಗೆ ಹಿನ್ನಡೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ನಿರೀಕ್ಷಿತ ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ. ಆರ್ಥಿಕ ಅಪರಾಧಗಳು ವಿಭಿನ್ನವಾಗಿದ್ದು, ಅದನ್ನು ಹಲವು ರೀತಿಯಲ್ಲಿ ತನಿಖೆಗೆ ಒಳಪಡಿಸಬೇಕಾಗುತ್ತದೆ. ಆರಂಭಿಕ ಹಂತಗಳಲ್ಲಿ ಜಾಮೀನು ನೀಡುವುದರಿಂದ ನಡೆಯುತ್ತಿರುವ ತನಿಖೆಗೆ ತೊಡಕುಂಟಾಗಬಹುದು" ಎಂದು ನ್ಯಾಯಾಲಯ ಹೇಳಿದೆ.
ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಈಗಾಗಲೇ ಸಿಬಿಐ ವಶದಲ್ಲಿ 15 ದಿನಗಳನ್ನು ಕಳೆದಿದ್ದಾರೆ.
ನಿಯಮಿತ ಜಾಮೀನುಗಾಗಿ ಆರೋಪಿಗಳು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಚಿದಂಬರಂ ಅವರ ನಿರೀಕ್ಷಿತ ಜಾಮೀನು ಅರ್ಜಿಗಳನ್ನು ರದ್ದುಗೊಳಿಸುವ ತೀರ್ಪಿನಲ್ಲಿ ಏಜೆನ್ಸಿ ಟಿಪ್ಪಣಿಯ ನಕಲು ಅಂಟಿಸಿರುವ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.