ಕರ್ತಾರ್‌ಪುರ : ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ದಿನಕ್ಕೆ 5000 ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಪ್ರಯಾಣ

ಭಾರತೀಯ ಪಾಸ್ ಪೋರ್ಟ್ ಹೊಂದಿದವರಿಗೆ ಕರ್ತಾರಪುರ ಗುರುದ್ವಾರಕ್ಕೆ ವೀಸಾ ರಹಿತವಾಗಿ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಪ್ರತಿದಿನ 5000 ಭಾರತೀಯ ಯಾತ್ರಾರ್ಥಿಗಳಿಗೆ ಗುರುದ್ವಾರಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗಿದೆ.

Last Updated : Jul 15, 2019, 10:26 AM IST
ಕರ್ತಾರ್‌ಪುರ : ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ದಿನಕ್ಕೆ 5000 ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಪ್ರಯಾಣ title=

ದೆಹಲಿ / ಇಸ್ಲಾಮಾಬಾದ್: ಕರ್ತಾರ್‌ಪುರ ಕಾರಿಡಾರ್‌ನ ವಿವಾದಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಎರಡನೇ ಸುತ್ತಿನ ಮಾತುಕತೆ ಭಾನುವಾರ ಕೊನೆಗೊಂಡಿದ್ದು, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಒಸಿಐ ಕಾರ್ಡ್ ಹೊಂದಿರುವವರಿಗೆ ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರಪುರ ಗುರುದ್ವಾರಕ್ಕೆ ವೀಸಾ ರಹಿತವಾಗಿ ಭೇಟಿ ನೀಡಲು ಪಾಕಿಸ್ತಾನ ಸಮ್ಮತಿ ಸೂಚಿಸಿದೆ. 

ಇದಕ್ಕೂ ಮೊದಲು ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಹೊಂದಿಕೊಂಡಂತೆ ಇರುವ ರಾವಿ ನದಿ ತೀರದಲ್ಲಿ ಪಾಕಿಸ್ತಾನ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಆ ಪ್ರದೇಶದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತ ಕಳವಳ ವ್ಯಕ್ತಪಡಿಸಿತ್ತು. 

ಈ ಕುರಿತು ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಒಸಿಐ ಕಾರ್ಡ್ ಹೊಂದಿರುವ ನಾಗರೀಕರು ಕರ್ತಾರಪುರ ಗುರುದ್ವಾರಕ್ಕೆ ವಾರದ ಎಲ್ಲಾ ಏಳು ದಿನಗಳವರೆಗೆ ವೀಸಾ ರಹಿತ ಪ್ರಯಾಣಕ್ಕೆ ಅನುಮತಿ ಸೂಚಿಸಲಾಗಿದೆ. ಅಲ್ಲದೆ ಇಸ್ಲಾಮಾಬಾದ್ ತನ್ನ ಬದಿಯಲ್ಲಿ ಸೇತುವೆ ನಿರ್ಮಿಸಲು ಒಪ್ಪಿಕೊಂಡಿದೆ. ಜೊತೆಗೆ 'ಭಾರತ ವಿರೋಧಿಯಂತಹ ಯಾವುದೇ ಚಟುವಟಿಕೆಗೂ ಅವಕಾಶ ನೀಡುವುದಿಲ್ಲ' ಎಂದು ಪಾಕಿಸ್ತಾನ ಭರವಸೆ ನೀಡಿದೆ.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌ಸಿಎಲ್ ದಾಸ್ ಅವರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ, ಪಂಜಾಬ್ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ನಿಯೋಗದಲ್ಲಿದ್ದರು. ಪ್ರತಿದಿನ 5000 ಭಾರತೀಯ ಯಾತ್ರಿಕರು ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ನೀಡಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.

"ಕರ್ತಾರ್ಪುರ್ ಕಾರಿಡಾರ್ ತೆರೆಯುವ ಬಗ್ಗೆ ಉಭಯ ದೇಶಗಳು 80% ವಿಷಯಗಳ ಬಗ್ಗೆ ಒಮ್ಮತವನ್ನು ಸಾಧಿಸಿವೆ, ಉಳಿದ ಸಮಸ್ಯೆಗಳನ್ನು ಮುಂಬರುವ ಮಾತುಕತೆಗಳಲ್ಲಿ ಬಗೆಹರಿಸಲಾಗುವುದು" ಎಂದು ವಾಗಾದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ಪ್ರತಿನಿಧಿಸಿದ ಪಾಕಿಸ್ತಾನ ಸಚಿವಾಲಯದ ವಕ್ತಾರ ಡಾ.ಫೈಸಲ್ ಹೇಳಿದರು.

ನವೆಂಬರ್ 2019 ರಂದು ಆಚರಿಸಲಾಗುವ ಶ್ರೀ ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 1974 ರ ಶಿಷ್ಟಾಚಾರದ ಅಡಿಯಲ್ಲಿ 10,000 ಭಾರತೀಯ ಯಾತ್ರಿಕರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಭಾರತದಿಂದ ಪಾಕಿಸ್ತಾನಕ್ಕೆ ಪ್ರಸ್ತಾಪಿಸಲಾಗಿದೆ.

ಕಾರಿಡಾರ್ ನಿರ್ಮಾಣಕ್ಕೆ ಉಭಯ ದೇಶಗಳು ಮುಂದಾಗಿದ್ದು ಭಾರತ ಈಗಾಗಲೇ ಕಾರಿಡಾರ್‌ನ ಶೇಕಡಾ 45 ರಷ್ಟು ಕೆಲಸವನ್ನು ಪೂರ್ಣಗೊಳಿಸಿದೆ ಮತ್ತು 4 ಲೇನ್‌ಗಳ ಹೆದ್ದಾರಿ ಮತ್ತು ಪ್ರಯಾಣಿಕರ ಬಸ್ ಟರ್ಮಿನಲ್ ಅನ್ನು ನಿರ್ಮಿಸುತ್ತಿದೆ. 
 

Trending News