ನವದೆಹಲಿ: ರಾಜ್ಯ ಶಾಸಕರು ರಾಜೀನಾಮೆಯನ್ನು ಅಂಗೀಕರಿಸಿದಿರುವುದಕ್ಕಾಗಿ ವಿಧಾನಸಭಾ ಸ್ಪೀಕರ್ ಗೆ ನಿರ್ದೇಶನ ಕೋರಿ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರವಾಗಿ ಅಭಿಷೇಕ್ ಮನು ಸಿಂಘ್ವಿ ಅವರು ನಾಳೆ ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ಪ್ರತಿನಿಧಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ್ ಎಎನ್ಐಗೆ ತಿಳಿಸಿದ್ದಾರೆ.
ರಾಜೀನಾಮೆಯನ್ನು ಅಂಗೀಕರಿಸುವಂತೆ ಮತ್ತು ಸದನದಿಂದ ಅನರ್ಹತೆಗಾಗಿ ಅರ್ಜಿಗಳನ್ನು ಮುಂದುವರಿಸದಂತೆ ವಿಧಾನಸಭಾ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ಕೋರಿ ಬಂಡಾಯ ಶಾಸಕರು ಇಂದು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದರು. ಶಾಸಕರ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಮುಖ್ಯ ನ್ಯಾಯಮೂರ್ತಿ ರಾಜನ್ ಗೊಗೊಯ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠದ ಮುಂದೆ ವಾದಿಸಲಿದ್ದಾರೆ. ನಾಳೆ ಸುಪ್ರೀಂಕೋರ್ಟ್ ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮುಕುಲ್ ರೋಹಟಗಿ ತಮ್ಮ ಅರ್ಜಿಯಲ್ಲಿ ಸ್ಪೀಕರ್ ಉದ್ದೇಶಪೂರ್ವಕವಾಗಿ ಶಾಸಕರ ರಾಜೀನಾಮೆ ಅಂಗೀಕಾರವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸ್ಪೀಕರ್ ತನ್ನ ಸಾಂವಿಧಾನಿಕ ಕರ್ತವ್ಯವನ್ನು ತ್ಯಜಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರತಾಪ್ ಗೌಡ ಪಾಟೀಲ್, ರಮೇಶ್ ಜಾರಕಿಹೋಳಿ, ಬೈರತಿ ಬಸವರಾಜ್, ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಅರ್ಬೈಲ್ ಶಿವರಾಮ್ ಹೆಬ್ಬಾರ್ ಮತ್ತು ಕಾಂಗ್ರೆಸ್ ನ ಮಹೇಶ್ ಕುಮಥಳ್ಳಿ ಮತ್ತು ಜೆಡಿ (ಎಸ್) ನ ಕೆ ಗೋಪಾಲಯ್ಯ, ಎಚ್ ವಿಶ್ವನಾಥ್ ಮತ್ತು ನಾರಾಯಣ್ ಗೌಡ ಅವರು ಅರ್ಜಿ ಸಲ್ಲಿಸಿರುವ ಶಾಸಕರಾಗಿದ್ದಾರೆ.