ಬೆಂಗಳೂರು: ಮಹಿಳಾ ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತೆಗಾಗಿ ಬಿಎಂಟಿಸಿ ವತಿಯಿಂದ 'ನಿರ್ಭಯಾ ಯೋಜನೆಯಡಿ'ಯಲ್ಲಿ 'ಪಿಂಕ್ ಸಾರಥಿ' ಹೆಸರಿನ ಜೀಪುಗಳನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ವಿಧಾನಸೌಧದ ಮುಂಭಾಗ ಲೋಕಾರ್ಪಣೆ ಮಾಡಿದರು.
'ನಿರ್ಭಯಾ ಯೋಜನೆಯಡಿ'ಯಲ್ಲಿ ವಾಹನಗಳ ಖರೀದಿಗಾಗಿ 56.7 ಕೋಟಿರೂ. ಅನುದಾನ ನೀಡಲಾಗಿತ್ತು. ಇದರಲ್ಲಿ 25 ಮಹೀಂದ್ರಾ ಬೊಲೆರೊ ವಾಹನಗಳನ್ನು ಖರೀದಿಸಿದ್ದು, ಅದಕ್ಕೆ 'ಪಿಂಕ್ ಸಾರಥಿ' ಎಂದು ಹೆಸರಿಡಲಾಗಿದೆ. 'ಪಿಂಕ್ ಸಾರಥಿ' ವಾಹನಗಳಲ್ಲಿನ ವಿಶೇಷತೆ ಎಂದರೆ ಇದರಲ್ಲಿ ಜಿಪಿಎಸ್ ನಿರ್ವಹಣೆ ಹಾಗೂ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ ಮಾಡಲಾಗಿದೆ.
ಪಿಂಕ್ ಸಾರಥಿ ವಾಹನಗಳಿಗೆ ಹಸಿರು ನಿಶಾನೆ ತೋರಿದ ಬಳಿಕ, ಸಿಎಂ ಕುಮಾರಸ್ವಾಮಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಕಾರ್ಡ್ ಮಾದರಿಯ ಉಚಿತ ವಿದ್ಯಾರ್ಥಿ ಪಾಸುಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್, ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್, ನಿರ್ದೇಶಕ ಅನುಪಮ್ ಅಗರವಾಲ್ ಭಾಗಿಯಾಗಿದ್ದರು.