ನವದೆಹಲಿ: ಎನ್ಸಿಪಿ ನಾಯಕ ಶರದ್ ಪವಾರ್ ಈಗ ಬಿಜೆಪಿ ಅಶ್ವಮೇಧ ತಡೆಗೆ ಹೊಸ ಸೂತ್ರಕ್ಕೆ ಮೊರೆಹೋಗಿದ್ದಾರೆ.
ಚುನಾವಣಾ ಫಲಿತಾಂಶಕ್ಕೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನಲೆಯಲ್ಲಿ ಈಗ ಬಿಜೆಪಿಯೇತರ ಸರ್ಕಾರ ರಚನೆಗಾಗಿ ಶರದ್ ಪವಾರ್ ಟಿಆರ್ಎಸ್ ನ ಕೆಸಿಆರ್, ಯೈಎಸ್ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಹಾಗೂ ಓಡಿಸ್ಸಾದ ನವೀನ್ ಪಟ್ನಾಯಕ್ ರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತೆಲಂಗಾಣದ ಕೆಸಿಆರ್ ಒಂದು ವೇಳೆ ಅತಂತ್ರ ಸಂಸತ್ತಿನ ಸ್ಥಿತಿ ಉಂಟಾದರೆ ಯುಪಿಎ ತಮ್ಮ ಬೆಂಬಲವಿದೆ ಎಂದು ಶರದ್ ಪವಾರ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.ಈಗಾಗಲೇ ಪ್ರತಿಪಕ್ಷಗಳ ನಾಯಕರ ನಿರಂತರ ಸಂಪರ್ಕದಲ್ಲಿ ಪವಾರ್ ಇದ್ದಾರೆ ಎನ್ನಲಾಗಿದೆ.ಜಗನ್ ಮೋಹನ್ ರೆಡ್ಡಿ ಅವರು ಪವಾರ್ ಕರೆಗೆ ಇನ್ನು ಉತ್ತರಿಸಬೇಕಾಗಿದೆ ಎನ್ನಲಾಗಿದೆ.
ಇನ್ನೊಂದೆಡೆಗೆ ದೇಶಾದ್ಯಂತ ಬಿಜೆಪಿಯೇತರ ಸರ್ಕಾರ ರಚನೆಗೆ ಪ್ರವಾಸ ಮಾಡುತ್ತಿರುವ ಚಂದ್ರಬಾಬು ನಾಯ್ಡು ಈಗಾಗಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿಯ ಮಾಯಾವತಿ, ಎಸ್ಪಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ರಾತ್ರಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ನಾಯ್ಡು ಚರ್ಚಿಸಿದ್ದಾರೆ.