ಲಕ್ನೋ: ಪ್ರಿಯಾಂಕ ಗಾಂಧಿ ಮೀರತ್ ನಲ್ಲಿ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದೆಡೆ ಪ್ರಿಯಾಂಕ್ ಅವರು ಚಂದ್ರಶೇಖರ್ ಆಜಾದ್ ಭೇಟಿಯಾಗುತ್ತಿದ್ದಂತೆ, ಮತ್ತೊಂದೆಡೆ ಎಸ್ಪಿ-ಬಿಎಸ್ಪಿ ಮುಖ್ಯಸ್ಥರಾದ ಅಖಿಲೇಶ್ ಯಾದವ್-ಮಾಯಾವತಿ ಭೇಟಿಯಾಗಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಉಭಯ ನಾಯಕರು ಅಮೇಥಿ-ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಪ್ರಿಯಾಂಕ ಗಾಂಧಿಯವರು ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿರುವ ವಿಷಯದಲ್ಲಿ ಮಾಯಾವತಿ ಕೋಪಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೀರತ್ ನಲ್ಲಿ ಪ್ರಿಯಾಂಕ ಭೇಟಿ ಬಳಿಕ ಮಾಯಾವತಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ತಮ್ಮ ನಿವಾಸ ಮಾಲ್ ಎವೆನ್ನ್ಯೂ ಗೆ ಕರೆಸಿ ಮಾತುಕತೆ ನಡೆಸಿದ್ದು, ಅಮೇಥಿ-ರಾಯ್ಬರೇಲಿ ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಅಖಿಲೇಶ್ ಯಾದವ್ ಗೆ ಸೂಚನೆ ನೀಡಿದ್ದಾರೆ.
ಸುಮಾರು ಅರ್ಧ ಗಂಟೆ ನಡೆದ ಈ ಸಭೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಜಂಟಿ ಸಾರ್ವಜನಿಕ ಸಭೆಗಳನ್ನೂ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಅಮೇಥಿ-ರಾಯ್ಬರೇಲಿ ಕ್ಷೇತ್ರಗಳ ಜೊತೆಗೆ ಇತರ ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬದಲಿಸುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಎಸ್ಪಿ ಪ್ರನಾಳಿಕೆಯಲ್ಲಿ ಬಿಎಸ್ಪಿಯಾ ಅಜೆಂಡಾ ಕೂಡಾ ಕಾಣಿಸಿಕೊಳ್ಳಲಿದೆ. ಏಕೆಂದರೆ ಬಿಎಸ್ಪಿ ಈವರೆಗೂ ಯಾವುದೇ ಚುನಾವಣೆಯಲ್ಲಿ ಪಕ್ಷದ ಮ್ಯಾನಿಫೆಸ್ಟೋವನ್ನು ಬಿಡುಗಡೆ ಮಾಡಿಲ್ಲ.
ಎರಡು ದಿನಗಳ ಹಿಂದೆಯಷ್ಟೇ(ಮಾರ್ಚ್ 12) ಘಟಬಂಧನ್ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ, ಬಿಎಸ್ಪಿ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದರು. ಇದರ ಬೆನ್ನಲ್ಲೇ ಮಾರ್ಚ್ 13ರಂದು ಪ್ರಿಯಾಂಕ ಗಾಂಧಿ ಮೀರತ್ ನಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.