ಆ ಸ್ಮಶಾನಕ್ಕೆ ಹೋದ ಸಾಕು ಪ್ರಾಣಿಗಳು ಹಿಂದಿರುಗದೇ ಇದ್ದುದನ್ನು ಕಂಡ ಗ್ರಾಮಸ್ಥರು ಸ್ಮಶಾನದಲ್ಲಿ ದೆವ್ವ-ಭೂತಗಳಿದ್ದು, ಅವು ಪ್ರಾಣಿಗಳನ್ನು ತಿನ್ನುತ್ತಿವೆ ಎಂದು ನಂಬಿದ್ದರು.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪಾಯ್ ಗುಡಿಯಲ್ಲಿರುವ ಸ್ಮಶಾನಕ್ಕೆ ಇದುವರೆಗೂ ಹೋದ ಕುರಿಗಳು, ಕೋಳಿಗಳು ವಾಪಸ್ ಬಂದಿದ್ದೇ ಇಲ್ಲ. ಹೀಗಾಗಿ ಈ ವಿಚಾರ ಅಲ್ಲಿನ ಗ್ರಾಮಸ್ಥರಲ್ಲಿ ಭಾರೀ ಭಯ ಹುಟ್ಟಿಸಿತ್ತು. ಆದರೆ, ಕುರಿ, ಕೋಳಿಗಳ ಕಾಣೆಗೆ ಕಾರಣವೇನು ಎಂಬುದನ್ನು ತಿಳಿದ ಬಳಿಕ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಜಲ್ಪಾಯ್ ಗುಡಿಯಲ್ಲಿರುವ ಸ್ಮಶಾನಕ್ಕೆ ಹೋದ ಸಾಕು ಪ್ರಾಣಿಗಳು ಹಿಂದಿರುಗದೇ ಇದ್ದುದನ್ನು ಕಂಡ ಗ್ರಾಮಸ್ಥರು ಸ್ಮಶಾನದಲ್ಲಿ ದೆವ್ವ-ಭೂತಗಳಿದ್ದು, ಅವು ಪ್ರಾಣಿಗಳನ್ನು ತಿನ್ನುತ್ತಿವೆ ಎಂದು ನಂಬಿದ್ದರು.
ಒಂದು ದಿನ ಆ ಸ್ಮಶಾನದಲ್ಲಿದ್ದ ಪೊದೆಯಲ್ಲಿ ಸಪ್ಪಳ ಕೇಳಿ ಅದೇನೆಂದು ಸ್ವತಃ ಅಲ್ಲಿನ ಜನತೆ ಪರೀಕ್ಷಿಸಿದಾಗ ಅಲ್ಲಿ ಅವರಿಗೆ ಕಂಡದ್ದು ಬೃಹತ್ ಗಾತ್ರದ ಹೆಬ್ಬಾವು!
ಬರೋಬ್ಬರಿ 16 ಅಡಿ ಉದ್ದದ 200 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಆ ಸ್ಮಶಾನದಲ್ಲಿ ಠಿಕಾಣಿ ಹೂಡಿತ್ತು.
ಆ ಹೆಬ್ಬಾವು ಅಲ್ಲಿಗೆ ಸೊಪ್ಪು, ಹುಲ್ಲು ತಿನ್ನಲು ಬರುತ್ತಿದ್ದ ಕುರಿ, ಆಡು, ಮೇಕೆ, ಕೋಳಿಗಳನ್ನು ಹಿಡಿದು ನುಂಗಿಹಾಕುತ್ತಿತ್ತು ಎಂಬುದನ್ನು ಅರಿತ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ 2 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಹೆಬ್ಬಾವನ್ನು ಹಿಡಿದು ಬೈಕಂತಪುರ ಗ್ರಾಮದ ಬಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.