ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 40 ಸೈನಿಕರು ದಾಳಿಯಲ್ಲಿ ಮೃತಪಟ್ಟಿದ್ದರು.ಈ ಹಿನ್ನಲೆಯಲ್ಲಿ ಜಮ್ಮ ಕಾಶ್ಮೀರದ ಆಡಳಿತವು ಕಾಶ್ಮೀರದ ಐವರು ಪ್ರತ್ಯೇಕವಾದಿ ನಾಯಕರಿಗೆ ಒದಗಿಸಿದ್ದ ಎಲ್ಲ ಮಾದರಿಯ ಭದ್ರತೆ ಹಾಗೂ ಸರ್ಕಾರಿ ಸೌಲಭ್ಯವನ್ನು ವಾಪಾಸ್ ಪಡೆದುಕೊಂಡಿದೆ.
ಮಿರ್ವೈಜ್ ಉಮರ್ ಫಾರೂಕ್, ಅಬ್ದುಲ್ ಘನಿ ಭಟ್, ಬಿಲಾಲ್ ಲೋನ್, ಹಾಶಿಮ್ ಖುರೇಷಿ ಮತ್ತು ಶಬೀರ್ ಷಾ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.ಆದಾಗ್ಯೂ, ಪಾಕಿಸ್ತಾನ ಪರವಾದ ಪ್ರತ್ಯೇಕತಾವಾದಿ ಸೈಯದ್ ಅಲಿ ಷಾ ಗೀಲಾನಿ ಅವರ ಆದೇಶದ ಬಗ್ಗೆ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.ಈಗ ಈ ಆದೇಶದ ಪ್ರಕಾರ, ಪ್ರತ್ಯೇಕತಾವಾದಿಗಳಿಗೆ ಒದಗಿಸಿದ ಎಲ್ಲಾ ಭದ್ರತೆ ಮತ್ತು ವಾಹನಗಳನ್ನು ಆಡಳಿತವು ಭಾನುವಾರ ಸಂಜೆ ಹಿಂಪಡೆಯಲಿದೆ ಎಂದು ಜಮ್ಮ ಕಾಶ್ಮೀರದ ಆಡಳಿತ ತಿಳಿಸಿದೆ.
ಭದ್ರತಾ ಅಥವಾ ಸೌಲಭ್ಯಗಳನ್ನು ಹೊಂದಿದ ಇತರ ಪ್ರತ್ಯೇಕತಾವಾದಿಗಳಿದ್ದರೆ ತಕ್ಷಣವೇ ಹಿಂತೆಗೆದುಕೊಳ್ಳುವ ಕುರಿತಾಗಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನ ಮೂಲದ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್ (ಜೆಎಂ) ಈ ದಾಳಿಯ ಹೊಣೆ ಹೊತ್ತ ಹಿನ್ನಲೆಯಲ್ಲಿ ಈಗ ಸರ್ಕಾರವು ಪ್ರತ್ಯೇಕತಾವಾದಿಗಳ ವಿರುದ್ದ ಈ ಕ್ರಮಕ್ಕೆ ಮುಂದಾಗಿದೆ. ಇದೇ ವೇಳೆ ಅಲ್ಲಿನ ಜನರು ಪಾಕಿಸ್ತಾನದಿಂದ ಹಣವನ್ನು ಪಡೆಯುವ ಬಗ್ಗೆ ಐಎಸ್ಐ ವಿಚಾರವಾಗಿ ಪರಿಶೀಲಿಸಬೇಕು ಎಂದು ಗೃಹ ಸಚಿವ ರಾಜ್ ನಾಥ್ ಸಿಂಗ್ ಶುಕ್ರವಾರದಂದು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಹೇಳಿದ್ದರು.