Akshaya Tritiya 2023: ವೈದಿಕ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ದಿನವನ್ನು ಅಕ್ಷಯ ತೃತೀಯಾ ಮಹಾಪರ್ವ ರೂಪದಲ್ಲಿ ಆಚರಿಸಲಾಗುತ್ತದೆ. ಮಂಗಳ ಕಾರ್ಯಗಳನ್ನು ನೆರವೇರಿಸಲು ಈ ದಿನವನ್ನು ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಬೆಳ್ಳಿ ಖರೀದಿಸಿ, ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಈ ದಿನದಂದು ಚಿನ್ನ, ಬೆಳ್ಳಿ ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದರೆ, ವ್ಯಕ್ತಿಯ ಜೀವನದಲ್ಲಿ ಸಿರಿ ಸಂಪತ್ತು ಸ್ಥಿರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಅಕ್ಷಯ ತೃತೀಯವನ್ನು ಶನಿವಾರ, 22 ಏಪ್ರಿಲ್ 2023 ರಂದು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ಪಾವನ ಪರ್ವದ ದಿನ ಯಾವ ಯಾವ ಮಹಾಯೋಗಗಳು ರೂಪುಗೊಳ್ಳುತಿವೆ ಮತ್ತು ಯಾವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ದಿನದ ಗರಿಷ್ಠ ಲಾಭವನ್ನು ಪಡೆದುಕೊಳ್ಳಬಹುದು ತಿಳಿದುಕೊಳ್ಳಲು ಪ್ರಯತ್ನಿಸೋಣ. ಇದಲ್ಲದೆ ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಲು ಮತ್ತು ಪೂಜಿಸಲು ಶುಭ ಸಮಯ ಯಾವುದು ಎಂಬುದರ ಮಾಹಿತಿ ಕೂಡ ಪಡೆದುಕೊಳ್ಳೋಣ ಬನ್ನಿ,
ಅಕ್ಷಯ ತೃತೀಯ 2023 ದಿನಾಂಕ ಮತ್ತು ಮುಹೂರ್ತ
ಈ ವರ್ಷ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿ ಶನಿವಾರ, ಏಪ್ರಿಲ್ 22 ರಂದು ಆರಂಭಗೊಳ್ಳಲಿದೆ. ಹೀಗಾಗಿ ಈ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ತೃತೀಯಾ ತಿಥಿಯ ಕುರಿತು ಹೇಳುವುದಾದರೆ, ಇದು ಬೆಳಗ್ಗೆ 7:09 ರಿಂದ ಆರಂಭಗೊಳ್ಳುತ್ತಿದೆ ಮತ್ತು ಮಾರನೇ ದಿನ ಅಂದರೆ ಏಪ್ರಿಲ್ 23 ರಂದು ಬೆಳಗ್ಗೆ 7:30 ರವರೆಗೆ ಇರಲಿದೆ. ಪೂಜೆಗೆ ಶುಭ ಸಮಯದ ಕುರಿತು ಹೇಳುವುದಾದರೆ, ಈ ಸಮಯ ಏಪ್ರಿಲ್ 22 ರಂದು ಬೆಳಗ್ಗೆ 7.05 ರಿಂದ ಮಧ್ಯಾಹ್ನ 12.20 ರವರೆಗೆ ಇರಲಿದೆ.
ಹಲವು ಮಹಾ ಯೋಗಗಳ ಶುಭ ಕಾಕತಾಳೀಯ
ಈ ಬಾರಿಯ ಅಕ್ಷಯ ತೃತೀಯಾ ಮಹಾಪರ್ವ ಅತ್ಯಂತ ವಿಶೇಷವಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಈ ದಿನ ಒಂದಲ್ಲ ಅಥವಾ ಎರಡಲ್ಲ ಒಟ್ಟು 6 ಮಹಾ ಯೋಗಗಳು ರೂಪುಗೊಳ್ಳಲಿವೆ. ಆ ಯೋಗಗಳು ಯಾವುವು ಎಂಬುದನ್ನೂ ಈಗ ತಿಳಿದುಕೊಳ್ಳೋಣ,
>> ಈ ದಿನದ ಮೊದಲ ಮಹಾ ಯೋಗ ಎಂದರೆ ಅದು 'ಆಯುಷ್ಮಾನ್ ಯೋಗ' ಇದು ಸೂರ್ಯೋದಯದಿಂದ ಆರಂಭಗೊಂಡು ಬೆಳಗ್ಗೆ 09:26 ರವರೆಗೆ ಇರಲಿದೆ.
>> ಎರಡನೇ ಶುಭ ಯೋಗ ಎಂದರೆ ಅದು 'ಸೌಭಾಗ್ಯ ಯೋಗ' ಇದು ಬೆಳಗ್ಗೆ 9:25 ರಿಂದ ಆರಂಭಗೊಂಡು ಮಾರನೆದಿನ ಅಂದರೆ ಏಪ್ರಿಲ್ 23 ರಂದು ಬೆಳಗ್ಗೆ 8:21 ರವರೆಗೆ ಇರಲಿದೆ.
>> ಮೂರನೇ ಶುಭ ಯೋಗ 'ತ್ರಿಪುಷ್ಕರ ಯೋಗ' ಬೆಳಗ್ಗೆ 05.49 ರಿಂದ ಆರಂಭಗೊಂಡು ಬೆಳಗ್ಗೆ 07.49 ರವರೆಗೆ ಇರಲಿದೆ.
>> ನಾಲ್ಕನೇ ಶುಭ ಯೋಗ ರವಿ ಯೋಗ ಏಪ್ರಿಲ್ 22 ರ ರಾತ್ರಿ 11:24 ರಿಂದ ಆರಂಭಗೊಂಡು ಮಾರನೇದಿನ ಏಪ್ರಿಲ್ 23 ರಂದು ಬೆಳಗ್ಗೆ 05:48 ರವರೆಗೆ ಇರಲಿದೆ.
>> ಐದನೇ ಮತ್ತು ಆರನೇ ಯೋಗಗಲಾಗಿರುವ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗಗಳ ಕುರಿತು ಹೇಳುವುದಾದರೆ, ಅವು ರಾತ್ರಿ 11:24 ರಿಂದ ಏಪ್ರಿಲ್ 23 ರ ಬೆಳಿಗ್ಗೆ 05:48 ರವರೆಗೆ ಇರಲಿವೆ.
ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಗೆ ಒಳ್ಳೆಯ ಮುಹೂರ್ತ ಯಾವುದು?
ಈಗಾಗಲೇ ನಾವು ಉಲ್ಲೇಖಿಸಿದಂತೆ ಈ ದಿನದಂದು ಚಿನ್ನ ಖರೀದಿಗೆ ವಿಶೇಷ ಪ್ರಾಮುಖ್ಯತೆಯನ್ನು ಕಲ್ಪಿಸಲಾಗಿದೆ, ಹೀಗಿರುವಾಗ ಅಕ್ಷಯ ತೃತೀಯ ದಿನದಂದು ಶುಭ ಮುಹೂರ್ತದಲ್ಲಿ ಚಿನ್ನವನ್ನು ಖರೀದಿಸಿದರೆ, ಅದರ ಮಹತ್ವವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಹಾಗಾದರೆ ಈ ದಿನದಂದು ಚಿನ್ನ ಖರೀದಿಸಲು ಯಾವ ಸಮಯ ಅತ್ಯಂತ ಮಂಗಳಕರ ಮತ್ತು ಶುಭವಾಗಿದೆ ತಿಳಿದುಕೊಳ್ಳೋಣ,
>> ಅಕ್ಷಯ ತೃತೀಯ ಪೂಜೆ ಮುಹೂರ್ತ - 22 ಏಪ್ರಿಲ್ 2023, ಶನಿವಾರ ಬೆಳಗ್ಗೆ 07:49 ರಿಂದ ಮಧ್ಯಾಹ್ನ 12:20 ರವರೆಗೆ (ಒಟ್ಟು ಅವಧಿ - 4 ಗಂಟೆ 31 ನಿಮಿಷಗಳು)
>> ತೃತೀಯಾ ತಿಥಿ ಪ್ರಾರಂಭ - 22 ಏಪ್ರಿಲ್ 2023, ಬೆಳಿಗ್ಗೆ 07:49 ರಿಂದ
>> ತೃತೀಯಾ ತಿಥಿ ಮುಕ್ತಾಯ - 23 ಏಪ್ರಿಲ್ 2023, ಬೆಳಗ್ಗೆ 07.47 ಕ್ಕೆ
>> ಚಿನ್ನ ಖರೀದಿಸಲು ಶುಭ ಮುಹೂರ್ತಗಳು - ಏಪ್ರಿಲ್ 22 ರಂದು ಬೆಳಗ್ಗೆ 07.49 ರಿಂದ ಏಪ್ರಿಲ್ 23 ರ ಬೆಳಗ್ಗೆ 05.48 ರವರೆಗೆ
>> ಬೆಳಗಿನ ಮುಹೂರ್ತ (ಶುಭ) - 07.49 ರಿಂದ 09.04 ರವರೆಗೆ
>> ಸಂಜೆ ಮುಹೂರ್ತ (ಚರ್, ಲಾಭ, ಅಮೃತ) - ಮಧ್ಯಾಹ್ನ 12.20 ರಿಂದ ಸಂಜೆ 05.13 ರವರೆಗೆ
>> ರಾತ್ರಿ ಮುಹೂರ್ತ (ಪ್ರಯೋಜನ) - ಸಂಜೆ 06:51 ರಿಂದ ರಾತ್ರಿ 08:13 ರವರೆಗೆ
>> ರಾತ್ರಿ ಮುಹೂರ್ತ (ಶುಭ, ಅಮೃತ್, ಚರ್) - ರಾತ್ರಿ 09:35 ರಿಂದ ಮಾರನೇ ದಿನ ಬೆಳಗ್ಗೆ 01:42 ರವರೆಗೆ
ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯಾ ಮಹತ್ವದ ಕುರಿತು ಹೇಳುವುದಾದರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಸೂರ್ಯ ಮೇಷ ರಾಶಿಯಲ್ಲಿ ಮತ್ತು ಚಂದ್ರನು ವೃಷಭ ರಾಶಿಯಲ್ಲಿ ವಿರಾಜಮಾನನಾಗಿರುತ್ತಾರೆ ಎನ್ನಲಾಗುತ್ತದೆ ಈ ದಿನವನ್ನು ಶುಭ ಹಾಗೂ ಮಂಗಳಕರ ಕಾರ್ಯಗಳನ್ನು ಕೈಗೊಳ್ಳಲು ಅತ್ಯಂತ ಮಂಗಳಕರ ಎಂದು ಭಾವಿಸಲಾಗುತ್ತದೆ. ಇದಲ್ಲದೆ, ಅಕ್ಷಯ ತೃತೀಯವು ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಖರೀದಿಸಿದರೆ, ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಸಮೃದ್ಧಿಯ ಸದಾಕಾಲ ನೆಲೆಸುತ್ತವೆ ಎಂದು ಭಾವಿಸಲಾಗುತ್ತದೆ.
ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಲು ಸಾಧ್ಯವಾಗದವರು ಏನು ಮಾಡಬೇಕು?
ಪುರಾಣ ಕಾಲದಿಂದಲೂ, ಅಕ್ಷಯ ತೃತೀಯ, ಅಕ್ಷಯ ಸಮೃದ್ಧಿ, ಅಕ್ಷಯ ಪುಣ್ಯ, ಅಕ್ಷಯ ಸಂತೋಷ, ಅಕ್ಷಯ ಶಾಂತಿಯೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಕ್ಷಯ ಎಂದರೆ ಅದು ಚಿರಕಾಲ ಇರುವಂತಹದ್ದು ಎಂದರ್ಥ. ಧರ್ಮ ಗ್ರಂಥಗಳಲ್ಲಿ, ಅಕ್ಷಯ ತೃತೀಯದಲ್ಲಿ ದಾನ ಮತ್ತು ಪೂಜೆಗೆ ಪ್ರಾಮುಖ್ಯತೆ ಕಲ್ಪಿಸಲಾಗಿತ್ತು, ಆದರೆ ಕಾಲಾಂತರದಲ್ಲಿ ಈ ಪ್ರಾಮುಖ್ಯತೆಯು ಚಿನ್ನವನ್ನು ಖರೀದಿಸುವ ಸಂಪ್ರದಾಯವಾಗಿ ಮಾರ್ಪಟ್ಟಿತು ಎನ್ನಲಾಗುತ್ತದೆ. ಆದರೆ, ಇದಕ್ಕೆ ನಿಖರವಾದ ಯಾವುದೇ ಸಾಕ್ಷಾಧಾರಗಳು ಲಭಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಈ ದಿನ ಏನಾದರೂ ಮಾಡಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಬಯಸುತ್ತಾರೆ, ಆದರೆ, ಒಂದು ವೇಳೆ ನೀವು ಚಿನ್ನ-ಬೆಳ್ಳಿ ಖರೀದಿಸಲು ಶಕ್ತವಾಗಿಲ್ಲ ಎಂದರೆ ನಿರಾಶೆಗೊಳ್ಳುವ ಅವಶ್ಯಕತೆ ಇಲ್ಲ. ಅಕ್ಷಯ ತೃತೀಯದಂದು ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೂ, ನಿಮ್ಮ ಜೀವನದಲ್ಲಿ ಅಕ್ಷಯ ಪುಣ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬುದಕ್ಕೆ ಹಲವಾರು ಉಪಾಯಗಳನ್ನು ಸೂಚಿಸಲಾಗಿದೆ. ಅಕ್ಷಯ ತೃತೀಯ ದಿನದಂದು ಯಾವುದೇ ಕಾರಣಾಂತರ ನಿಮಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗಿಲ್ಲ ಎಂದಾದಲ್ಲಿ, ಈ ದಿನ ನೀವು ಬಾರ್ಲಿಯನ್ನು ಖರೀದಿಸಬಹುದು. ದೇವ-ದೇವತೆಗಳ ಪೂಜೆಯಲ್ಲಿ ಬಾರ್ಲಿಯನ್ನು ಶಾಮೀಲುಗೊಳಿಸಿ. ಧರ್ಮಗ್ರಂಥಗಳಲ್ಲಿ ಬಾರ್ಲಿಯನ್ನು ಚಿನ್ನಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಅದನ್ನು ತಿಜೋರಿಯಲ್ಲಿ ಇರಿಸುತ್ತಾರೆ. ಕೆಲವರು ಅದನ್ನು ತಮ್ಮ 'ಶಿಖಾ' ಅಥವಾ ಜುಟ್ಟಿಗೆ ಕಟ್ಟಿಕೊಳ್ಳುತ್ತಾರೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ನಿಮಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ನಿರಾಶೆಗೊಳ್ಳಬೇಡಿ ಮತ್ತು ಬಾರ್ಲಿಯನ್ನು ಖರೀದಿಸಿ. ಅದನ್ನು ವಿಷ್ಣುವಿಗೆ ಅರ್ಪಿಸಿ. ಪೂಜೆಯ ನಂತರ ಶುಭ್ರವಾದ ಕೆಂಪುಬಣ್ಣದ ಬಟ್ಟೆಯಲ್ಲಿ ಅದನ್ನು ಕಟ್ಟಿ ಹಣ ಇಡುವ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಿದಷ್ಟು ಅದೃಷ್ಟ ಮತ್ತು ಸಮೃದ್ಧಿಯನ್ನು ನೀವು ಪ್ರಾಪ್ತಿಮಾಡಿಕೊಳ್ಳಬಹುದು.
ಈ ವಸ್ತುಗಳನ್ನು ದಾನ ಮಾಡುವುದರಿಂದ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ
ಅಕ್ಷಯ ತೃತೀಯ ದಿನದಂದು ಪೂಜೆ ಪುನಸ್ಕಾರದ ಜೊತೆಗೆ ದಾನಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಅಕ್ಷಯ ತೃತೀಯ ದಿನದಂದು ದಾನ ಮಾಡಿದರೆ ಅದರಿಂದ ಸಿಗುವ ಪುಣ್ಯ ಮತ್ತೊಂದಿಲ್ಲ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೂ ಅಕ್ಷಯ ತೃತೀಯದಂದು ಅಕ್ಷಯ ಪುಣ್ಯ ಪ್ರಾಪ್ತಿಯಾಗಬೇಕು ಎಂದಾದಲ್ಲಿ, ಈ ದಿನ ನೀರು, ಕುಂಭ, ಸಕ್ಕರೆ, ಕೊಡೆ, ಬೀಸಣಿಗೆ ಇತ್ಯಾದಿಗಳನ್ನು ದೇವರು ಮತ್ತು ಪೂರ್ವಜರ ಹೆಸರಿನಲ್ಲಿ ನಿರ್ಗತಿಕರಿಗೆ ದಾನಮಾಡಿ. ಇದಲ್ಲದೇ ನೀವು ಬಯಸಿದಲ್ಲಿ ನೀರು ತುಂಬಿದ ಹೂಜಿ, ಸಕ್ಕರೆ, ಬೆಲ್ಲ, ಬರ್ಫಿ, ಬಿಳಿಬಣ್ಣದ ಬಟ್ಟೆ, ಉಪ್ಪು, ಪಾನಕ, ಅಕ್ಕಿ, ಬೆಳ್ಳಿಯನ್ನು ಸಹ ದಾನಮಾಡುವ ಮೂಲಕ ಅಕ್ಷಯ ಪುಣ್ಯವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.
ಪಿತೃದೋಷ ನಿವಾರಣೆಗೆ ಈ ಉಪಾಯ ಮಾಡಿ
ನಾವು ಈ ಮೊದಲೇ ಉಲ್ಲೇಖಿಸಿದಂತೆ ಅಕ್ಷಯ ತೃತೀಯ ದಿನ ಮಾಡಿದ ದಾನವು ಅಕ್ಷಯ ಪುಣ್ಯವನ್ನು ಕರುಣಿಸುತ್ತದೆ. ಹೀಗಾಗಿ ಈ ದಿನದಂದು ದಾನದ ಮಹತ್ವವನ್ನು ಅಕ್ಷಯ ಪುಣ್ಯದ ಜೊತೆಗೆ ಪಿತೃರನ್ನು ಸಂತೋಷ ಪಡಿಸುವ ಮುಖಾಂತರ ಕೂಡ ಪ್ರಾಪ್ತಿ ಮಾಡಿಕೊಳ್ಳಬಹುದು. ಯಾವುದೇ ಓರ್ವ ವ್ಯಕ್ತಿಯ ಜಾತಕದಲ್ಲಿ ಪಿತೃದೋಷವಿದ್ದರೆ, ಆ ವ್ಯಕ್ತಿ ಅಕ್ಷಯ ತೃತೀಯಾ ದಿನದ ಪೂಜೆಯ ವೇಳೆ ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿಗೆ ಅಕ್ಷತೆಯನ್ನು ಅರ್ಪಿಸಬೇಕು ಎನ್ನಲಾಗುತ್ತದೆ. ಈ ಉಪಾಯವನ್ನು ಮಾಡುವುದರಿಂದ ಜಾತಕದಲ್ಲಿರುವ ಪಿತ್ರದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಈ ದಿನ ನೀವು ನಿಮ್ಮನ್ನಗಲಿದ ಪಿತೃರಿಗೆ ನೈವೇದ್ಯವನ್ನು ಅರ್ಪಿಸಬೇಕು. ಇದರ ಹೊರತಾಗಿ, ನಿಮ್ಮ ಜೀವನದಲ್ಲಿ ಪಿತೃದೋಷದ ಛಾಯೆ ಇದ್ದರೆ, ನೀವು ಪಿತೃರ ಆತ್ಮಶಾಂತಿಗಾಗಿ ಭಾಗವದ್ಗೀತೆಯ 7 ನೇ ಅಧ್ಯಾಯವನ್ನು ಪಠಿಸಬೇಕು.
ಈ ಸಂಗತಿಗಳು ನಿಮಗೆ ತಿಳಿದಿರಲಿ
>> ಯಾವುದೇ ಶುಭ ಕಾರ್ಯಗಳನ್ನು ಮಾಡಲು ಈ ದಿನ ನೀವು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ
>> ಈ ದಿನ ಚಿನ್ನ-ಬೆಳ್ಳಿ ಖರೀದಿಸುವುದು ಮಂಗಳಕರ, ಆದರೆ ಖರೀದಿಸಲು ಸಾಧ್ಯವಾಗದಿದ್ದರೆ ಬಾರ್ಲಿ ಖರೀದಿಸಿ ಅಕ್ಷಯ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಿ.
>> ಈ ದಿನ ಕೆಂಪು ಬಣ್ಣದ ಬಟ್ಟೆಯಲ್ಲಿ 11 ಕವಡೆಗಳನ್ನು ಕಟ್ಟಿ ಆ ಮೂಟೆಯನ್ನು ಪೂಜಾ ಸ್ಥಳದಲ್ಲಿ ಇರಿಸಿ, ಇದರಿಂದ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ.
>> ಈ ದಿನ ಪೂಜಾ ಸ್ಥಳದಲ್ಲಿ ಏಕಾಕ್ಷಿ ಅಂದರೆ ಒಂದು ಕಣ್ಣಿನ ತೆಂಗಿನ ಕಾಯಿಯನ್ನು ಪ್ರತಿಷ್ಠಾಪಿಸಬೇಕು.
>> ಪೂಜೆಯವೇಳೆ ತಾಯಿ ಲಕುಮಿಗೆ ಕೇಸರಿ ಹಾಗೂ ಅರಿಶಿಣ ಅರ್ಪಿಸಿ.
>> ಹಿಂದೂ ಧರ್ಮದಲ್ಲಿ ಕನ್ಯಾದಾನಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ ಅನೇಕ ಜನರು ಈ ದಿನ ವಿವಾಹ ಸಮಾರಂಭಗಳನ್ನು ಇಟ್ಟುಕೊಳ್ಳುತ್ತಾರೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.