ನವದೆಹಲಿ: ಜನಪ್ರಿಯ ಬಾಲಿವುಡ್ ಸಿನಿಮಾಗಳಾದ ಗೋಲಿಯಾನ್ ಕಿ ರಸ್ಲೀಲಾ ರಾಮ್ ಲೀಲಾ ಮತ್ತು ರಾಜ್ ನೀತಿ ಯಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆ ನಟಿ 'ಬರ್ಖಾ ಬಿಶ್ತ್' ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಅವರ ಪತ್ನಿ ಪಾತ್ರ ನಿರ್ವಹಿಸಲಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವರದಿಗಳ ಪ್ರಕಾರ, 'ಬರ್ಖಾ ಬಿಶ್ತ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಮೋದಿ ಪತ್ನಿ ಜಶೋದಾಬೆನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾರತದಲ್ಲಿ 23 ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರವನ್ನು ಸರಬ್ಜಿತ್, ಮೇರಿಕೋಮ್ ಅವರ ಜೀವನಾಧಾರಿತ ಸಿನಿಮಾ ನಿರ್ದೇಶನ ಖ್ಯಾತಿಯ ಒಮಂಗ್ ಕುಮಾರ್ ಅವರೇ ನಿರ್ದೇಶನ ಮಾಡಲಿದ್ದು, ಸಂದೀಪ್ಸಿಂಗ್ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ.
ಚಿತ್ರದಲ್ಲಿ ನಟ ವಿವೇಕ್ ಒಬೇರಾಯ್, ಬರ್ಖಾ ಬಿಶ್ತ್ ಸೇನ್ಗುಪ್ತ, ಬೋಮನ್ ಇರಾನಿ, ಝರಿನಾ ವಹಾಬ್, ಮನೋಜ್ ಜೋಶಿ ಮತ್ತು ಪ್ರಶಾಂತ್ ನಾರಾಯಣನ್ ಮೊದಲಾದವರು ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಜೀವನಾಧಾರಿತ ಚಿತ್ರ 'ಪಿ.ಎಂ ನರೇಂದ್ರಮೋದಿ' ಎಂದು ಹೆಸರಿಡಲಾಗಿದೆ. ಜನವರಿ 7 ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಂಡಿದ್ದು, ದೊಡ್ಡ ಮಟ್ಟದ ಯಶಸ್ಸಿಗೆ ಕಾಯುತ್ತಿರುವ ವಿವೇಕ್ ಗೆ ಈ ಚಿತ್ರ ದೊಡ್ಡ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.