ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಕೇಂದ್ರ ಸರಾಕ್ರಿ ಉದ್ಯೋಗ ಮತ್ತು ಸೇವೆಯಲ್ಲಿ ಶೇ.10 ಮೀಸಲಾತಿ ಕಾಯ್ದೆ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಬ್ಬಂದಿ ಸಚಿವಾಲಯ, "ಕೇಂದ್ರ ಸರಕಾರದ ಉದ್ಯೋಗ ಹಾಗೂ ಸೇವೆಯಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತದೆ. ಫೆಬ್ರವರಿ 1, 2019 ಹಾಗೂ ನಂತರ ಅಧಿಸೂಚನೆ ಹೊರಡಿಸುವ ಎಲ್ಲಾ ನೇರ ನೇಮಕಾತಿಗಳಿಗೆ ಅನ್ವಯ ಆಗಲಿದೆ" ಎಂದು ತಿಳಿಸಿದೆ.
ಸಂವಿಧಾನದ 124ನೇ ತಿದ್ದುಪಡಿಯ ಪ್ರಕಾರ ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಜ. 9ರಂದು ಅನುಮೋದಿಸಲಾಗಿತ್ತು. ಅದರನ್ವಯ ನೂತನ ಮೀಸಲಾತಿ ತಿದ್ದುಪಡಿ ಕಾಯ್ದೆ ಫೆ. 1ರಿಂದ ಜಾರಿಯಾಗುತ್ತಿದೆ.
ಪ್ರಸ್ತುತ ಜಾರಿಯಲ್ಲಿರುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಇರುವ ಮೀಸಲಾತಿ ಅಡಿಯಲ್ಲಿ ಬಾರದಿರುವ ಹಾಗೂ ಯಾವ ಕುಟುಂಬದ ಆದಾಯ ವಾರ್ಷಿಕ ಎಂಟು ಲಕ್ಷಕ್ಕಿಂತ ಕಡಿಮೆ ಇರುತ್ತದೋ ಅಂಥವರನ್ನು ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಅಡಿಯಲ್ಲಿ ಫಲಾನುಭವಿಗಳಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.