ಮಿನಾಹಾಸ: ಅಕ್ರಮವಾಗಿ ಸಾಕಲಾಗಿದ್ದ ಮೊಸಳೆಯೊಂದು ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ಹಾಕಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಲ್ಲಿನ ನಾರ್ಥ್ ಸುಲವೇಸಿಯ ಪ್ರಯೋಗಾಲಯದ ಮುಖ್ಯಸ್ಥೆಯಾಗಿದ್ದ ಡೇಸಿ ಟುವೊ ಎಂಬ 44 ವರ್ಷದ ಮಹಿಳಾ ವಿಜ್ಞಾನಿ ಅಕ್ರಮವಾಗಿ 14 ಅಡಿ ಉದ್ದದ ಮೊಸಳೆಯನ್ನು ಸಾಕಿದ್ದಳು. ಆದರೆ ಇದೀಗ ಅದೇ ಮೊಸಳೆ ಆಕೆಯ ಕೈ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿದ್ದು, ಆಕೆ ಸಾವನ್ನಪ್ಪಿದ್ದಾಳೆ.
ತಾನೇ ಸಾಕಿದ್ದ ಮೊಸಳೆ ಇದ್ದ ಜಾಗಕ್ಕೆ ಆಕೆ ಆಯತಪ್ಪಿ ಬಿದ್ದದ್ದರಿಂದ ಮೊಸಳೆ ಆಕೆಯನ್ನು ತಿಂದು ಹಾಕಿದೆ ಎನ್ನಲಾಗಿದೆ. ಬಳಿಕ ಮಾರನೆಯ ದಿನ ಬೆಳಿಗ್ಗೆ ಆಕೆಯ ಮೃತದೇಹವನ್ನು ನೋಡಿದ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೋಲಿಸ್ ಅಧಿಕಾರಿಯೊಬ್ಬರು, ಮೊಸಳೆಯು ಮಹಿಳೆಯ ಕೈ ಮತ್ತು ಹೊಟ್ಟೆ ಭಾಗವನ್ನು ತಿಂದು ಹಾಕಿದೆ. ಈ ಮೊಸಳೆಯನ್ನು ಅನುಮತಿ ಪಡೆಯದೇ ಅಕ್ರಮವಾಗಿ ಸಾಕಲಾಗಿತ್ತು. ಈಗ ಅದನ್ನು ಹಿಡಿದು ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.