ನವದೆಹಲಿ: ಭಾರತೀಯ ಆಡಳಿತ ಸೇವೆ(IAS) ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ 2010ರ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಮಿಂಚಿದ್ದ ಷಾ ಫೈಸಲ್ ಬುಧವಾರ ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಧುಮುಕುವ ನಿರ್ಧಾರ ಕೈಗೊಂಡಿದ್ದಾರೆ.
ಕಾಶ್ಮೀರದಲ್ಲಿ ನಿರಂತರ ಹತ್ಯೆಗಳು ನಡೆಯುತ್ತಿದ್ದರೂ ಈ ಸಮಸ್ಯೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ. ಈಗಿನ ಕೇಂದ್ರ ಸರಕಾರವು ಮಹತ್ವದ ಸ್ವಾಯತ್ತ ಸಂಸ್ಥೆಗಳೆನಿಸಿರುವ ಸಿಬಿಐ, ಆರ್ಬಿಐ, ಎನ್ಐಎ ಮೊದಲಾದವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನದ ಪದರವನ್ನೇ ಹಾಳು ಮಾಡುತ್ತಿದೆ ಎಂದಿರುವ ಷಾ ಫೈಸಲ್, ಇದೀಗ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ.
"ದೇಶದಲ್ಲಿರುವ 20 ಕೋಟಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದ್ದು, ಹಿಂದುತ್ವವಾದಿ ಶಕ್ತಿಗಳು ಮುಸ್ಲಿಮರು ತಲೆ ಎತ್ತಿ ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕಾಶ್ಮೀರ ಹೊಂದಿರುವ ವಿಶೇಷ ಸ್ಥಾನಗಳನ್ನು ಕಸಿದುಕೊಳ್ಳಲು ಕುತಂತ್ರಗಳನ್ನು ಮಾಡಲಾಗುತ್ತಿದೆ. ದ್ವೇಷ ಮತ್ತು ಸಾಂಸ್ಕೃತಿಕ ಅಸಹಿಷ್ಣುತೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಐಎಎಸ್ ಗೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಏನತ್ಮಧ್ಯೆ, ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ವರಿಷ್ಠ ಒಮರ್ ಅಬ್ದುಲ್ಲಾ ಬುಧವಾರ ಷಾ ಫೈಸಲ್ಗೆ ಸ್ವಾಗತ ಕೋರಿದ್ದಾರೆ. 'ಅಧಿಕಾರಶಾಹಿಗಳ ನಷ್ಟ ರಾಜಕೀಯಕ್ಕೆ ಲಾಭ' ಎಂದು ಹೇಳಿದ್ದಾರೆ.
The bureaucracy’s loss is politics’ gain. Welcome to the fold @shahfaesal. https://t.co/955C4m5T6V
— Omar Abdullah (@OmarAbdullah) January 9, 2019
ಫೈಸಲ್ ಇತ್ತೀಚೆಗೆ ಹಾರ್ವರ್ಡ್ ಕೆನಡಿ ಸ್ಕೂಲ್ನಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಕಳೆದ ವಾರ ಕಾಶ್ಮೀರಕ್ಕೆ ಬಂದ ಅವರು, ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.