ಪ್ರತ್ಯೇಕ ವಿಭಾಗವಾಗಿ ಸೋಷಿಯಲ್ ಸ್ಟಾಕ್ ಎಕ್ಸ್ಚೇಂಜ್ ಪ್ರಾರಂಭಿಸಲು ಅಂತಿಮ ಅನುಮೋದನೆ ಪಡೆದ NSE

Social Stock Exchange: ಇದು ಸಾಮಾಜಿಕ ಉದ್ಯಮಗಳು ಹಮ್ಮಿಕೊಳ್ಳುವ ಸಾಮಾಜಿಕ ಉಪಕ್ರಮಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಹೊಸ ಮಾರ್ಗೋಪಾಯ ಹಾಗೂ ಮುನ್ನೋಟ ಒದಗಿಸಲಿದೆ. ಜೊತೆಗೆ ಸಾಮಾಜಿಕ ಉದ್ಯಮಗಳಿಂದ ನಿಧಿಯ ಕ್ರೋಡೀಕರಣ ಮತ್ತು ನಿಧಿಯ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಒದಗಿಸಲಿದೆ.

Written by - Bhavishya Shetty | Last Updated : Feb 23, 2023, 05:13 PM IST
    • ಪ್ರತ್ಯೇಕ ವಿಭಾಗವಾಗಿ ಕಾರ್ಯನಿರ್ವಹಿಸಲಿರುವ ಸೋಷಿಯಲ್‌ ಸ್ಟಾಕ್ ಎಕ್ಸ್ಚೇಂಜ್
    • ಭಾರತದ ಷೇರು ನಿಯಂತ್ರಣ ಮಂಡಳಿಯಿಂದ ಅಂತಿಮ ಅನುಮೋದನೆ
    • ಸಾಮಾಜಿಕ ಉಪಕ್ರಮಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಹೊಸ ಮಾರ್ಗೋಪಾಯ ಹಾಗೂ ಮುನ್ನೋಟ ಒದಗಿಸಲಿದೆ
ಪ್ರತ್ಯೇಕ ವಿಭಾಗವಾಗಿ ಸೋಷಿಯಲ್ ಸ್ಟಾಕ್ ಎಕ್ಸ್ಚೇಂಜ್ ಪ್ರಾರಂಭಿಸಲು ಅಂತಿಮ ಅನುಮೋದನೆ ಪಡೆದ NSE title=
Social Stock Exchange

ಮುಂಬೈ: ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್ (ಎಸ್‌ಎಸ್‌ಇ) ಆರಂಭಿಸಲು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ಎನ್‌ಎಸ್‌ಇ)  ಭಾರತದ ಷೇರು ನಿಯಂತ್ರಣ ಮಂಡಳಿಯಿಂದ (ಸೆಬಿ) 2023ರ ಫೆಬ್ರುವರಿ 22ರಂದು ಅಂತಿಮ ಅನುಮೋದನೆ ಪಡೆದುಕೊಂಡಿದೆ.

ಪ್ರತ್ಯೇಕ ವಿಭಾಗವಾಗಿ ಕಾರ್ಯನಿರ್ವಹಿಸಲಿರುವ ಸೋಷಿಯಲ್‌ ಸ್ಟಾಕ್ ಎಕ್ಸ್ಚೇಂಜ್:

ಇದು ಸಾಮಾಜಿಕ ಉದ್ಯಮಗಳು ಹಮ್ಮಿಕೊಳ್ಳುವ ಸಾಮಾಜಿಕ ಉಪಕ್ರಮಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಹೊಸ ಮಾರ್ಗೋಪಾಯ ಹಾಗೂ ಮುನ್ನೋಟ ಒದಗಿಸಲಿದೆ. ಜೊತೆಗೆ ಸಾಮಾಜಿಕ ಉದ್ಯಮಗಳಿಂದ ನಿಧಿಯ ಕ್ರೋಡೀಕರಣ ಮತ್ತು ನಿಧಿಯ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಒದಗಿಸಲಿದೆ. ಸಾಮಾಜಿಕ ಉದ್ದೇಶದ ಮಹತ್ವ ಹೊಂದಿರುವ ಯಾವುದೇ ಸಾಮಾಜಿಕ ಉದ್ಯಮ, ಲಾಭರಹಿತ ಸಂಸ್ಥೆ (ಎನ್‌ಪಿಒ) ಅಥವಾ ಲಾಭ ಉದ್ದೇಶದ ಸಾಮಾಜಿಕ ಉದ್ಯಮಗಳು (ಎಫ್‌ಪಿಇ), ಈ ಸೋಷಿಯಲ್‌ ಸ್ಟಾಕ್ ಎಕ್ಸ್‌ಚೇಂಜ್ ವಿಭಾಗದಲ್ಲಿ ನೋಂದಾಯಿಸಿಕೊಳ್ಳಬಹುದು ಹಾಗೂ ವಹಿವಾಟು ನಡೆಸಬಹುದು.

ಇದನ್ನೂ ಓದಿ: Bank Holidays March 2023 : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲಿ 12 ದಿನ ಬ್ಯಾಂಕ್ ಬಂದ್!

ಅರ್ಹ ‘ಎನ್‌ಪಿಒ’ಗಳನ್ನು ಸಂಯೋಜಿಸುವ ಪ್ರಕ್ರಿಯೆಯು, ಸೋಷಿಯಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ವಿಭಾಗದಲ್ಲಿ ನೋಂದಣಿ ಮಾಡುವುದರೊಂದಿಗೆ ಆರಂಭಗೊಳ್ಳಲಿದೆ. ನೋಂದಣಿ ನಂತರ ‘ಎನ್‌ಪಿಒ’ಗಳು ಸಾರ್ವಜನಿಕ ನೀಡಿಕೆ ಅಥವಾ ಖಾಸಗಿ ನಿಯೋಜನೆಯ ಮೂಲಕ ಝೀರೊ ಕೂಪನ್‌ ಝೀರೊ ಪ್ರಿನ್ಸಿಪಲ್‌ (ಜೆಡ್‌ಸಿಜೆಡ್‌ಪಿ) ನಂತಹ ಹಣಕಾಸು ಉತ್ಪನ್ನಗಳ ಮೂಲಕ ನಿಧಿ ಸಂಗ್ರಹ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಸದ್ಯದ ನಿಯಂತ್ರಣ ಕ್ರಮಗಳು, ‘ಜೆಡ್‌ ಸಿ ಜೆಡ್‌ ಪಿ’ ನೀಡಿಕೆಯ ಕನಿಷ್ಠ ನೀಡಿಕೆ ಗಾತ್ರವನ್ನು ₹ 1 ಕೋಟಿ ಮತ್ತು ಚಂದಾದಾರಿಕೆಗೆ ಕನಿಷ್ಠ ಅರ್ಜಿಯ ಗಾತ್ರವನ್ನು ₹ 2 ಲಕ್ಷಗಳಿಗೆ ನಿಗದಿಪಡಿಸಿವೆ.

ಅರ್ಹ ‘ಎನ್‌ಪಿಒ’ಗಳಿಗೆ, ಷೇರುಗಳ ನೀಡಿಕೆ ಮತ್ತು ವಹಿವಾಟು ನಡೆಸುವ ಪ್ರಕ್ರಿಯೆಯು, ಷೇರುಪೇಟೆಯಲ್ಲಿ ಚಾಲ್ತಿಯಲ್ಲಿ ಇರುವ ಷೇರುಗಳ ನೀಡಿಕೆ ಹಾಗೂ ವಹಿವಾಟು ನಡೆಸುವ ರೀತಿಯಲ್ಲಿಯೇ ಇರಲಿದೆ. ಈ ಪ್ರಕ್ರಿಯೆಯು, ಸೋಷಿಯಲ್‌ ಎಂಟರ್‌ಪ್ರೈಸಸ್‌ಗಳು ಅರ್ಹತೆ ಪಡೆಯಲು ಬೇಕಾದ ಮಾನದಂಡಗಳಿಗೆ ಹೆಚ್ಚುವರಿಯಾಗಿ ಮೇನ್‌ ಬೋರ್ಡ್‌ನ ಅರ್ಹತಾ ಮಾನದಂಡ, ಎಸ್‌ಎಂಇ ಪ್ಲಾಟ್‌ಫಾರ್ಮ್‌, ಅಥವಾ ಇನ್ನೊವೇಟರ್ಸ್‌ ಗ್ರೋತ್‌ ಪ್ಲ್ಯಾಟ್‌ಫಾರ್ಮ್‌ ಆಧರಿಸಿರುತ್ತದೆ.

ಇದನ್ನೂ ಓದಿ: ಸ್ವಂತ ಜಮೀನು ಹೊಂದಿರುವವರಿಗೆ ಸರ್ಕಾರದ ಮಹತ್ವದ ಘೋಷಣೆ!

ಎನ್‌ಎಸ್‌ಇಯ  ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶಿಶ್‌ ಕುಮಾರ್ ಚೌಹಾನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್ ಅನ್ನು ಒಂದು ಪ್ರತ್ಯೇಕ ವಿಭಾಗವಾಗಿ ಪ್ರಾರಂಭಿಸಲು ರಾಷ್ಟ್ರೀಯ ಷೇರುಪೇಟೆಗೆ (ಎನ್‌ಎಸ್‌ಇ) ಅನುಮತಿ ನೀಡಿರುವುದಕ್ಕೆ ನಾನು ‘ಸೆಬಿ’ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಬೆಳವಣಿಗೆ ಬಗ್ಗೆ ಜಾಗೃತಿ ಮೂಡಿಸಲು ನಾವು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.  ಸದ್ಯಕ್ಕೆ  ಷೇರುಪೇಟೆಯಲ್ಲಿ ಪ್ರಗತಿಯಲ್ಲಿ ಇರುವ ಸೋಷಿಯಲ್‌ ಎಂಟರ್‌ಪ್ರೈಸಸ್‌ಗಳನ್ನು ಸಂಯೋಜಿಸುವ ಪ್ರಕ್ರಿಯೆಯಲ್ಲಿ ಅಗತ್ಯ ನೆರವು ನೀಡಲಾಗುವುದು. ಸೋಷಿಯಲ್‌ ಸ್ಟಾಕ್ ಎಕ್ಸ್‌ಚೇಂಜ್ ವಿಭಾಗದಲ್ಲಿ ನೋಂದಣಿ ಮಾಡಿಸುವುದು ಮತ್ತು ವಹಿವಾಟು ನಡೆಸುವುದರ ಬಗ್ಗೆ ತಿಳಿದುಕೊಳ್ಳಲು ಮತ್ತು ಇದರ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ತಂಡಗಳ ಜೊತೆ ಸಂಪರ್ಕದಲ್ಲಿರಲು ಸಾಮಾಜಿಕ ಉದ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News