ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ.

Last Updated : Nov 15, 2018, 03:10 PM IST
ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ title=

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ 125 ಅಡಿ ಎತ್ತರದ ತಾಯಿ ಕಾವೇರಿ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 

ಪ್ರಸಿದ್ಧ ಪ್ರವಾಸಿ ತಾಣವಾದ ಕೃಷ್ಣರಾಜಸಾಗರ ಜಲಾಶಯವನ್ನು ಸರ್ ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ್ದರು. ಇದೀಗ ಆ ಜಲಾಶಯದಲ್ಲಿ ಬರೋಬ್ಬರಿ 125 ಅಡಿ ಎತ್ತರದ ತಾಯಿ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಷ್ಟೇ ಅಲ್ಲದೆ, ಅದೇ ಸ್ಥಳದಲ್ಲಿ ಮ್ಯೂಸಿಯಂ ಕಾಂಪ್ಲೆಕ್ಸ್ ಮತ್ತು ಕೆ.ಆರ್.ಎಸ್ ಜಲಾಶಯದ ಪಕ್ಷಿ ನೋಟವನ್ನು ಒದಗಿಸುವ 360 ಅಡಿ ಎತ್ತರದ 2 ಗಾಜಿನ ಗೋಪುರಗಳು ನಿರ್ಮಾಣಕ್ಕೂ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. 

ಕರ್ನಾಟಕ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಐತಿಹಾಸಿಕ ಸ್ಮಾರಕಗಳೊಂದಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೂ ಸರ್ಕಾರ ಚಿಂತನೆ ನಡೆಸಿದೆ. ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಲಾಶಯದ ಬಳಿಯಲ್ಲಿ ಒಂದು ನೂತನ ಲೇಕ್ ನಿರ್ಮಾಣ ಮಾಡಲಾಗುವುದು. ಅಲ್ಲಿ ಮ್ಯೂಸಿಯಂ ಕಾಂಪ್ಲೆಕ್ ನಿರ್ಮಿಸಿ, ಅದರ ತುತ್ತ ತುದಿಯಲ್ಲಿ ತಾಯಿ ಕಾವೇರಿ ಪ್ರತಿಮೆ ಅಳವಡಿಸಿಸಲಾಗುವುದು. ಈ ಪ್ರತಿಮೆ ಕೆ.ಆರ್.ಎಸ್. ಜಲಾಶಯಕ್ಕಿಂತಲೂ ಎತ್ತರದಲ್ಲಿ ಇರಲಿದೆ ಎಂದು ಹೇಳಿದರು. 

ಮುಂದುವರೆದು ಮಾತನಾಡಿದ ಅವರು, ಈ ಯೋಜನೆಗೆ ಅಗತ್ಯವಾದ ಭೂಮಿಯನ್ನು ಹೊರತುಪಡಿಸಿ, ಇನ್ಯಾವ ಬಂಡವಾಳವನ್ನೂ ಸರ್ಕಾರ ಹೂಡುತ್ತಿಲ್ಲ. ಈ ಯೋಜನೆಗೆ ಬಂಡವಾಳ ಹೂಡಿಕೆಗೆ ಬಂಡವಾಳಗಾರರನ್ನು ಆಹ್ವಾನಿಸಲಾಗಿದೆ. ಸರಕಾರದಿಂದ ಒಂದು ರೂಪಾಯಿ ಹಣವನ್ನೂ ವೆಚ್ಚ ಮಾಡುತ್ತಿಲ್ಲ ಎಂದು ಡಿಕೆಶಿ ಹೇಳಿದರು. 
 

Trending News