ಪಂಚ ಭೂತಗಳಲ್ಲಿ ಲೀನವಾದ ಅದಮ್ಯ ಚೇತನ ಅನಂತ್ ಕುಮಾರ್

ಅಂತ್ಯಕ್ರಿಯೆ ವೇಳೆ ಸಾವಿರಾರು ಮಂದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ಅಮರ್‌ ರಹೇ ಅನಂತ್‌ ಕುಮಾರ್‌...ಅಮರ್‌ ರಹೇ ಅನಂತ್‌ ಕುಮಾರ್‌ ಎಂಬ ಘೋಷಣೆಗಳನ್ನು ಕೂಗಿದರು.

Last Updated : Nov 13, 2018, 04:12 PM IST
ಪಂಚ ಭೂತಗಳಲ್ಲಿ ಲೀನವಾದ ಅದಮ್ಯ ಚೇತನ ಅನಂತ್ ಕುಮಾರ್ title=

ಬೆಂಗಳೂರು: ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಅದಮ್ಯ ಚೇತನ, ಜನಾನುರಾಗಿ ನಾಯಕ ಇನ್ನು ನೆನಪು ಮಾತ್ರ...

ತೀವ್ರ ಅನಾರೋಗ್ಯದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. 

ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ಸೋಮವಾರ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ 8 ರಿಂದ 9 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಬ್ರಾಹ್ಮಣ ವಿಧಿಗಳಂತೆ ಅಂತಿಮ ಸಂಸ್ಕಾರ ನೆರವೇರಿತು. ಅನಂತ್ ಕುಮಾರ್ ತಮ್ಮ ನಂದ ಕುಮಾರ್ ಅಂತ್ಯ ಸಂಸ್ಕಾರ ನೆರವೇರಿಸಿದರು. 

ಕೇಂದ್ರ ಸಚಿವರಾದ ಕೇಂದ್ರ ಸಚಿವರಾದ ರಾಜ್‌ನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌, ರವಿಶಂಕರ ಪ್ರಸಾದ್​ ಡಿ.ವಿ.ಸದಾನಂದ ಗೌಡ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಡ್ವಾಣಿ, ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಗಣ್ಯರು ಅನಂತಕುಮಾರ್​ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 

ಅಂತ್ಯಕ್ರಿಯೆ ವೇಳೆ ಸಾವಿರಾರು ಮಂದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ಅಮರ್‌ ರಹೇ ಅನಂತ್‌ ಕುಮಾರ್‌...ಅಮರ್‌ ರಹೇ ಅನಂತ್‌ ಕುಮಾರ್‌ ಎಂಬ ಘೋಷಣೆಗಳನ್ನು ಮೊಳಗಿಸಿದರು. 

Trending News