ಬೆಂಗಳೂರು: ಕಳೆದ ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ.
ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಎಸಿಪಿ ವೆಂಕಟೇಶ್ ಪ್ರಸನ್ನ ಅವರು 48 ಗಂಟೆಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ನೋಟಿಸ್ ನೀಡಿದ್ದರು. ಈ ಬೆನ್ನಲ್ಲೇ ಇಂದು ಜನಾರ್ಧನ ರೆಡ್ಡಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನಲ್ಲಿಯೂ ಕೂಡ ಎರಡು ರಿಟ್ ಅರ್ಜಿಗಳನ್ನು ಜನಾರ್ಧನರೆಡ್ಡಿ ಪರ ವಕೀಲರು ಸಲ್ಲಿಸಿದ್ದಾರೆ. ಪ್ರಕರಣದ ರದ್ದು ಕೋರಿ ಒಂದು ಕ್ರಿಮಿನಲ್ ರಿಟ್ ಪಿಟಿಷನ್ ಹಾಗೂ ತನಿಖಾಧಿಕಾರಿಗಳ ಬದಲಾವಣೆ ಕೋರಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಪ್ರಕರಣವನ್ನು ರದ್ದು ಮಾಡಬೇಕು ಮತ್ತು ತನಿಖಾಧಿಕಾರಿಗಳು ಪೂರ್ವಾಗ್ರಹಪೀಡಿತರಾಗಿದ್ದು ಅವರನ್ನು ಬದಲಾವಣೆ ಮಾಡಬೇಕೆಂದು ಜನಾರ್ಧನ ರೆಡ್ಡಿ ಪರ ವಕೀಲರು ಮನವಿ ಮಾಡಿದ್ದಾರೆ.