ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಸರ್ಕಾರ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡ ಬಳ್ಳಾರಿ ಬಿಜೆಪಿ ಭದ್ರಕೋಟೆ ಅಂತಾ ಹೇಳುತ್ತಿದ್ರು ಈಗ ಏನಾಯ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ "ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಕೆಲಸ ಮಾಡಿದ ಕಾರಣ 4 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರ ಜತೆಗೆ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಇದೇ ವೇಳೆ ಮಧು ಬಂಗಾರಪ್ಪ ಸೋತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು "ಶಿವಮೊಗ್ಗದಲ್ಲಿ ಅಭ್ಯರ್ಥಿ ಹಾಕಿದ್ದು ಕಡೇ ಗಳಿಕೆಯಲ್ಲಿ.. ಸ್ವಲ್ಪ ಮೊದಲೇ ಹಾಕಿದ್ದರೆ ಗೆಲ್ಲುವ ಅವಕಾಶ ಇತ್ತು. 50 ಸಾವಿರ ಮತಗಳ ಅಂತರದಿಂದ ಅಲ್ಲಿ ಸೋತಿರುವುದನ್ನು ಒಪ್ಪುತ್ತೇನೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯ ತಂತ್ರದ ಬಗ್ಗೆ ಪ್ರತಿಕ್ರಿಯಿಸುತ್ತಾ "ಹಳೇ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡ್ತೀವಿ. ಮುಂದಿನ ಲೋಕಸಭೆ ಸಹ ಕಾಂಗ್ರೆಸ್ ಜತೆ ಚುನಾವಣೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡ್ತೀವಿ ಎಂದು ತಿಳಿಸಿದರು.
ತಮ್ಮ ಬದುಕಿನ ಕಡೆಯ ಹೋರಾಟ ಎಂದ ದೇವೇಗೌಡರು "ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆ ಇರಬಹುದು, ಬಿಬಿಎಂಪಿ ಇರಬಹುದು ಎಲ್ಲದರಲ್ಲೂ ನಾವು ಕಾಂಗ್ರೆಸ್ ಜತೆ ನಿಂತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಏನೇ ಮಾತನಾಡಿದ್ದರೂ, ಅವರು ನಮ್ಮ ಬಗ್ಗೆ ಏನೇ ಮಾತನಾಡಿದ್ದರೂ ಮರೆತು ಮುಂದುವರಿದಿದ್ದೇವೆ" ಎಂದು ತಿಳಿಸಿದರು