ನವದೆಹಲಿ: ಭಾರತೀಯ ತೈಲ ನಿಗಮವು ಪ್ರತಿ ಸಿಲಿಂಡರ್ ಅಡುಗೆ ಅನಿಲ ದರವನ್ನು ಬುಧವಾರ ಏರಿಕೆ ಮಾಡಿದ್ದು, ನವೆಂಬರ್ 1 ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.
ಸಬ್ಸಿಡಿ ಸಹಿತ 14.2 ಕೆಜಿ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 2.94 ರೂ. ಏರಿಕೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ದರ 60 ರೂ.ಗಳಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ದೆಹಲಿಯಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ ಬೆಲೆ 502.40 ರೂ. ಇತ್ತು. ಆದರೀಗ 505.34 ರೂ.ಗಳಿಗೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಬೆಲೆ ಏರಿಕೆಯ ಮೊತ್ತ ಅಧಿಕ ಅನಿಸದಿದ್ದರೂ, ಕಳೆದ ಜೂನ್ ತಿಂಗಳಿನಿಂದ ಈವರೆಗೆ ಸತತ ಆರನೇ ಬಾರಿ ಬೆಲೆ ಏರಿಕೆಯಾಗಿದೆ.
ಮಾರುಕಟ್ಟೆ ಬೆಲೆಯಲ್ಲಿ ಎಲ್ಲಾ ಗ್ರಾಹಕರು ಅಡುಗೆ ಅನಿಲ ಕೊಳ್ಳುತ್ತಾರೆ. ಆದಾಗ್ಯೂ ಸರ್ಕಾರ ಸಬ್ಸಿಡಿ ಮೊತ್ತವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಲ್ಲಿ ಒದಗಿಸುವ ಮೂಲಕ ವರ್ಷವೊಂದರಲ್ಲಿ ಪ್ರತಿ ಕುಟುಂಬಕ್ಕೆ 14.2 ಕೆ.ಜಿ. 12 ಸಿಲಿಂಡರ್ ಗಳನ್ನು ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹಾಗೂ ವಿದೇಶಿ ವಿನಿಮಯ ದರಕ್ಕನುಗುಣವಾಗಿ ಪ್ರತಿ ತಿಂಗಳು ಸಬ್ಸಿಡಿ ಹಣದಲ್ಲಿ ವ್ಯತ್ಯಾಸವಾಗುತ್ತದೆ.