ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ಈ ದಿನವನ್ನು ಪುಣ್ಯದಿನವನ್ನಾಗಿ ಇಡೀ ದೇಶದೆಲ್ಲೆಡೆ ಆಚರಿಸಲು ಮಹಾರಾಷ್ಟ್ರದ ನಾಸಿಕ್ನ ಪುಣ್ಯಭೂಮಿಗೆ ತೆರಳುತ್ತಿದ್ದಾರೆ. ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಿರುವ ಯಾತ್ರಾರ್ಥಿಗಳಿಗಾಗಿ ರಾಜ್ಯ ಸರಕಾರ ಬಸ್ ವ್ಯವಸ್ಥೆ ಮಾಡಿದ್ದು, ಇಂದು ಈ ಬಸ್ಗಳಿಗೆ ಚಾಲನೆ ನೀಡಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಈ ದಿನವನ್ನು ಆಚರಿಸಲು ಸಾವಿರಾರು ಯಾತ್ರಾರ್ಥಿಗಳು ಪ್ರತಿ ವರ್ಷ ಮಹಾರಾಷ್ಟ್ರದಲ್ಲಿರುವ ದೀಕ್ಷಾಭೂಮಿಗೆ ತೆರಳುತ್ತಾರೆ. ಈ ಬಾರಿ ರಾಜ್ಯದಿಂದ ತೆರಳುತ್ತಿರುವವರಿಗಾಗಿ ನಮ್ಮ ಸರಕಾರ 23 ಐರಾವತ ಬಸ್ಗಳನ್ನು ಏರ್ಪಡಿಸಿದೆ. ಇಂದು ಈ ಬಸ್ಗಳಿಗೆ ಚಾಲನೆ ನೀಡಿ, ಶುಭ ಹಾರೈಸಿದೆ. pic.twitter.com/XmwSbUsBx7
— Dr. G Parameshwara (@DrParameshwara) October 17, 2018
ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಗಪುರ್ ನಲ್ಲಿರುವ ದೀಕ್ಷಾ ಭೂಮಿಯಲ್ಲಿ ಈ ದಿನದಂದು ಪ್ರಾರ್ಥನಾ ಸಲ್ಲಿಸಲು ತೆರಳುವ ಯಾತ್ರಾರ್ಥಿಗಳಿಗೆ ರಾಜ್ಯದಿಂದ 23 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಈ ವಾಹನಗಳಿಗೆ ವಿಧಾನಸೌಧ ಮುಂಭಾಗ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಾಸಿಕ್ನಲ್ಲಿ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ಈ ದಿನವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಲಕ್ಷಾಂತರ ಯಾತ್ರಾರ್ಥಿಗಳು ಈ ಪುಣ್ಯ ಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ನಾಗಪುರಗೆ ತೆರಳುತ್ತಾರೆ.
ಬೆಂಗಳೂರು ಹಾಗೂ ಕಲಬುರ್ಗಿಯಿಂದಲೂ ಸಾವಿರಾರು ಯಾತ್ರಾರ್ಥಿಗಳು ತೆರಳುತ್ತಾರೆ. ಇವರಿಗಾಗಿ ಒಟ್ಟು 23 ಐರಾವತ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಮೂರು ಬಸ್ಗಳು ಕಲಬುರ್ಗಿಯಿಂದ ತೆರಳಲಿವೆ ಎಂದರು.
ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಈ ದಿನವನ್ನು ಆಚರಿಸಲು ಒಂದು ವಾರದಲ್ಲಿಯೇ ಒಂದು ಕೋಟಿಗೂ ಹೆಚ್ಚು ಜನ ತೆರಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಹಜ್ ಮಾದರಿಯಲ್ಲೇ ಈ ಪುಣ್ಯಸ್ಥಳವು ಪ್ರಸಿದ್ಧಿ ಪಡೆದುಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಅಂಬೇಡ್ಕರ್ ಅವರ ದೀಕ್ಷೆ ಪಡೆದ ಪುಣ್ಯ ಭೂಮಿಗೆ ತೆರಳಲು ಸರಕಾರದಿಂದಲೇ ವಾಹನ ವ್ಯವಸ್ಥೆ ಕಲ್ಪಿಸಿಕೊಡಲಿದ್ದೇವೆ ಎಂದರು.