ಬೆಂಗಳೂರು: ಈ ಹಿಂದೆ ವಿವಿಧ ವರ್ಗಗಳ ಫಲಾನುಭವಿಗಳಿಗೆ ಬೇರೆ ಬೇರೆ ಹೆಸರಿನ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿತ್ತು. ಬಿಪಿಎಲ್ ಕುಟುಂಬಗಳಿಗೆ ವಾಜಪೇಯಿ ಆರೋಗ್ಯಶ್ರೀ, ಎಪಿಎಲ್ ಕುಟುಂಬಗಳಿಗೆ ರಾಜೀವ್ ಆರೋಗ್ಯ ಭಾಗ್ಯ, ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಆತ್ಮಾಹುತಿಗೆ ಒಳಗಾದ ರೈತ ಕುಟುಂಬಗಳಿಗೆ ಇಂದಿರಾ ಸುರಕ್ಷಾ ಯೋಜನೆ, ರಸ್ತೆ ಅಪಘಾತದ ಗಾಯಾಳುಗಳಿಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ - ಹೀಗೆ ವಿವಿಧ ವರ್ಗಗಳ ಜನರಿಗೆ ವಿವಿಧ ಯೋಜನೆಗಳು ಜಾರಿಯಲ್ಲಿದ್ದವು. ಇದರಿಂದಾಗಿ ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಯೋಜನೆಗಳ ಅಡಿಯಲ್ಲಿ ಫಲಾನುಭವಿ ಆಗಿರುವ ಸಂಭವಗಳು ಇರುತ್ತಿತ್ತು. ಇಂತಹ ಸಂದರ್ಭದಲ್ಲಿ ಒಂದೇ ಚಿಕಿತ್ಸೆಗೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದುಕೊಳ್ಳುವ ಸಾಧ್ಯತೆಯಿರುವ ಕಾರಣ ನಕಲು (ಡೂಪ್ಲಿಕೇಷನ್) ಹಾಗೂ ಯೋಜನೆಗಳ ದುರುಪಯೋಗಕ್ಕೆ ಅವಕಾಶವಾಗುತ್ತಿತ್ತು. ಈ ಎಲ್ಲ ದುರುಪಯೋಗಗಳನ್ನು ತಪ್ಪಿಸುವ ಉದ್ದೇಶದಿಂದ ಒಂದೇ ಯೋಜನೆಯ ಅಡಿಯಲ್ಲಿ ಕರ್ನಾಟಕದ ಎಲ್ಲ ನಿವಾಸಿಗಳಿಗೆ ಚಿಕಿತ್ಸೆ ಒದಗಿಸಲು ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇತರ ಯೋಜನೆಗಳಿಗೆ ಹೋಲಿಸಿದರೆ ‘ಆರೋಗ್ಯ ಕರ್ನಾಟಕ’ ಉತ್ತಮ:
* ಯಶಸ್ವಿನಿ ಯೋಜನೆಯಲ್ಲಿ ವಾರ್ಷಿಕ ವಂತಿಗೆ ಪಾವತಿಸಬೇಕಾಗಿತ್ತು ಮತ್ತು ಇದು ಕೇವಲ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಯಾವುದೇ ವಂತಿಗೆ ಪಾವತಿಸಬೇಕಾಗಿಲ್ಲ. ಈ ಯೋಜನೆ ರಾಜ್ಯದ ಎಲ್ಲ ನಿವಾಸಿಗಳಿಗೂ ಲಭ್ಯವಿದೆ.
* ಯಶಸ್ವಿನಿ ಯೋಜನೆಯಡಿಯಲ್ಲಿ ದ್ವಿತೀಯ ಹಾಗೂ ತೃತೀಯ ಹಂತದ 823 ಚಿಕಿತ್ಸೆಗಳನ್ನು ಮಾತ್ರ ಒದಗಿಸುತ್ತಿತ್ತು. ಇದರಲ್ಲಿ 50 ಚಿಕಿತ್ಸೆಗಳು ಮಾತ್ರ ತೃತೀಯ ಹಂತದ ಚಿಕಿತ್ಸೆಗಳಾಗಿದ್ದವು. ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಪ್ರಾಥಮಿಕ, ಸರಳ ದ್ವಿತೀಯ, ಕ್ಲಿಷ್ಟಕರ ದ್ವಿತೀಯ, ತೃತೀಯ ಮತ್ತು ತುರ್ತು ಚಿಕಿತ್ಸೆಗಳು ಸೇರಿದಂತೆ ಒಟ್ಟು 1530 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ.
* ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ವೈದ್ಯರ ಸಮಾಲೋಚನಾ ಶುಲ್ಕ ಇರುವುದಿಲ್ಲ. ಶಸ್ತ್ರಚಿಕಿತ್ಸೆಯ ಪೂರ್ವ ಅಥವಾ ನಂತರದ ಸ್ಥಿರೀಕರಣ ವೈದ್ಯಕೀಯ ಆರೈಕೆ ಇರುತ್ತದೆ ಹಾಗೂ ಅನುಸರಣೆ ಚಿಕಿತ್ಸೆ ಮತ್ತು ವೈದ್ಯಕೀಯ ನಿರ್ವಹಣೆ ಸಹ ಇರುತ್ತದೆ.
* ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಮಾತ್ರ ತೃತೀಯ ಹಂತದ ಚಿಕಿತ್ಸೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲ ನಾಗರೀಕರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಗಳು, ಸರಳ ದ್ವಿತೀಯ ಹಂತದ ಚಿಕಿತ್ಸೆಗಳು, ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳು, ತೃತೀಯ ಹಂತದ ಚಿಕಿತ್ಸೆಗಳು ಮತ್ತು ತುರ್ತು ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ.
* ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ತೃತೀಯ ಹಂತದ 663 ಚಿಕಿತ್ಸೆಗಳನ್ನು ಮಾತ್ರ ಒದಗಿಸುತ್ತಿತ್ತು. ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಪ್ರಾಥಮಿಕ, ಸರಳ ದ್ವಿತೀಯ, ಕ್ಲಿಷ್ಟಕರ ದ್ವಿತೀಯ, ತೃತೀಯ ಮತ್ತು ತುರ್ತು ಚಿಕಿತ್ಸೆಗಳು ಸೇರಿದಂತೆ ಒಟ್ಟು 1530 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ.
* ಈ ಹಿಂದೆ ಜಾರಿಯಲ್ಲಿದ್ದ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ ಅಡಿಯಲ್ಲಿ ಅಪಘಾತದ ಗಾಯಾಳುಗಳಿಗೆ ಮೊದಲ 48 ಗಂಟೆಗಳ ಅವಧಿಯ ತುರ್ತು ಚಿಕಿತ್ಸೆಯನ್ನು ಮಾತ್ರ ಒದಗಿಸಲಾಗುತ್ತಿತ್ತು. ಈಗ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಮೊದಲ 48 ಗಂಟೆಗಳ ತುರ್ತು ಚಿಕಿತ್ಸೆಯೂ ಸೇರಿದಂತೆ ರೋಗಿಗೆ ಪೂರ್ಣಪ್ರಮಾಣದ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಮೇಲಿನ ಅಂಶಗಳನ್ನು ಗಮನಿಸಿದಾಗ ಇತರ ಯೋಜನೆಗಳಿಗಿಂತ ಆರೋಗ್ಯ ಕರ್ನಾಟಕ ಯೋಜನೆ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಹೆಚ್ಚು ಉಪಯುಕ್ತವಾಗಿರುತ್ತದೆ. ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಾಗ ಕಂಡುಬರುವ ಅನುಭವಗಳು ಹಾಗೂ ಕಲಿಕೆಗಳನ್ನು ಆಧರಿಸಿ ಯೋಜನೆಯಲ್ಲಿ ಸುಧಾರಣೆ ತರುವಂತಹ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈ ಮಾದರಿಯನ್ನು ಅನುಸರಿಸಿ ರಾಜ್ಯದ ಎಲ್ಲ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಜೂನ್ -2018 ರಿಂದ ಇಲ್ಲಿಯವರೆಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಲಕ್ಷಾಂತರ ಜನರು ಪಡೆದುಕೊಂಡಿರುತ್ತಾರೆ ಹಾಗೂ ಸಾಮಾನ್ಯ ದ್ವಿತೀಯ ಆರೋಗ್ಯ ಸೇವೆಗಳ ಪೈಕಿ ಒಳರೋಗಿಗಳಾಗಿ 15,24,880 ರೋಗಿಗಳು ಹಾಗೂ 1,10,880 ಪ್ರಧಾನ ಚಿಕಿತ್ಸೆಗಳು ಹಾಗೂ 1,46,811 ಕಿರಿಯ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಕ್ಲಿಷ್ಟಕರ ದ್ವಿತೀಯ ಹಾಗೂ ತೃತೀಯ ಚಿಕಿತ್ಸೆಗಳೂ ಸೇರಿದಂತೆ ಇಲ್ಲಿಯವರೆಗೆ 40,969 ರೋಗಿಗಳಿಗೆ ರೆಫರಲ್ ಮೂಲಕ ಚಿಕಿತ್ಸೆ ನೀಡಲಾಗಿದೆ. ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ 5,760 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಭಾಗವಹಿಸಲು ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಅಸಕ್ತಿಯನ್ನು ವ್ಯಕ್ತಪಡಿಸಿದ್ದು, ಈಗಾಗಲೇ 528 ಖಾಸಗಿ ಅಸ್ಪತ್ರೆಗಳು ಮತ್ತು 384 ಸಾರ್ವಜನಿಕ ಆಸ್ಪತ್ರೆಗಳು ಸೇರಿ ಒಟ್ಟು 912 ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಾವಣೆಗೊಂಡಿದ್ದು, ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸುತ್ತಿವೆ.