ಸಂವಿಧಾನ ವಿರೋಧಿ ನಡೆಗಳನ್ನೇಕೆ ಕಾಂಗ್ರೆಸ್‌ ಪ್ರೋತ್ಸಾಹಿಸುತ್ತಿದೆ?: ಬಿಜೆಪಿ ಪ್ರಶ್ನೆ

ವಿವಾದಿತ ಮತಾಂತರ ನಿಷೇಧ(ವಿಧೇಯಕ)ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

Written by - Zee Kannada News Desk | Last Updated : Dec 21, 2021, 05:41 PM IST
  • ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
  • ರಾಜ್ಯದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರಗಳಿಗೆ #AntiConversionBill ಮೂಲಕ ತಡೆ ಬೀಳಲಿದೆ
  • ಗೋ ಹತ್ಯೆಗೆ ಪ್ರೋತ್ಸಾಹ ಹಾಗೂ ಮತಾಂತರಕ್ಕೆ ಸಮ್ಮತಿ ಇವು ಕಾಂಗ್ರೆಸ್ ಪಕ್ಷದ ನಿಲುವುಗಳಾಗಿವೆ
ಸಂವಿಧಾನ ವಿರೋಧಿ ನಡೆಗಳನ್ನೇಕೆ ಕಾಂಗ್ರೆಸ್‌ ಪ್ರೋತ್ಸಾಹಿಸುತ್ತಿದೆ?: ಬಿಜೆಪಿ ಪ್ರಶ್ನೆ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ವಿಪಕ್ಷಗಳ ಭಾರೀ ವಿರೋಧದ ನಡುವೆಯೇ ವಿವಾದಿತ ಮತಾಂತರ ನಿಷೇಧ ವಿಧೇಯಕ(Anti-Conversion Bill 2021)ವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬಲವಂತದ ಮತಾಂತರಗಳಿಗೆ #AntiConversionBill ಮೂಲಕ ತಡೆ ಬೀಳಲಿದೆ’ ಅಂತಾ ಹೇಳಿದೆ.

‘ಸಂವಿಧಾನ ಕಲ್ಪಿಸಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಬಲವಂತದ ಮತಾಂತರದ ಮೂಲಕ ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌(Dr. BR Ambedkar) ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಈ ಹಿಂದೆ ಗೋ ಹತ್ಯಾ ನಿಷೇಧ ಕಾಯ್ದೆಗೂ ವಿರೋಧ ವ್ಯಕ್ತಪಡಿಸಿದ್ದ  ಕಾಂಗ್ರೆಸ್ ಈಗ #AntiConversionBillಗೆ ವಿರೋಧಿಸುತ್ತಿದೆ. ಗೋ ಹತ್ಯೆಗೆ ಪ್ರೋತ್ಸಾಹ ಹಾಗೂ ಮತಾಂತರಕ್ಕೆ ಸಮ್ಮತಿ ಇವು ಕಾಂಗ್ರೆಸ್ ಪಕ್ಷದ ನಿಲುವುಗಳಾಗಿವೆ. ಕಾಂಗ್ರೆಸ್‌ ಹಿಂದೂಗಳನ್ನು ಅವಮಾನಿಸಬಹುದಾದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ’ ಅಂತಾ ಟೀಕಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಆಗ್ರಹ: ಜನವರಿ 9ರಿಂದ ಪಾದಯಾತ್ರೆ ಹಮ್ಮಿಕೊಂಡ ಕಾಂಗ್ರೆಸ್

‘ಬಲವಂತದ ಮತಾಂತರವನ್ನು ತಡೆಯುವುದೇ #AntiConversionBillನ ಆದ್ಯ ಉದ್ದೇಶ. ಆದರೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕರು ಕ್ರೈಸ್ತ ಸಮುದಾಯವನ್ನು ಈ ಕಾಯ್ದೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ನೆನಪಿಡಿ ಇದೇ ಕಾಂಗ್ರೆಸ್‌(Congress) ಸಿಎಎ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿತ್ತು. ಮುಗ್ಧ ಜನರಲ್ಲಿ ಮಾತೃಧರ್ಮದ ಬಗ್ಗೆ ತುಚ್ಛವಾದ ಅಭಿಪ್ರಾಯ ತುಂಬಿಸಿ ಅವರ ‘ತಲೆಕೆಡಿಸಿ’ ಬಲವಂತವಾಗಿ ಅನ್ಯ ಧರ್ಮಕ್ಕೆ ಮತಾಂತರಿಸಲು ಸಂವಿಧಾನದ ಯಾವ ಭಾಗದಲ್ಲಿ ಅವಕಾಶ ನೀಡಲಾಗಿದೆ? ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವುದು ತಪ್ಪೇ? ಸಂವಿಧಾನ ವಿರೋಧಿ ನಡೆಗಳನ್ನೇಕೆ ಕಾಂಗ್ರೆಸ್‌ ಪ್ರೋತ್ಸಾಹಿಸುತ್ತಿದೆ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

‘ಮತಾಂತರ ನಿಷೇಧ ಕಾಯ್ದೆ(Anti Conversion Bill 2021)ಗೂ ಕ್ರೈಸ್ತರಿಗೂ ಯಾವುದೇ ಸಂಬಂಧವಿಲ್ಲ. ಯಾರು ಬಲವಂತದ ಮತಾಂತರ ಮಾಡುತ್ತಾರೋ ಅವರಿಗೆ #AntiConversionBill ಅನ್ವಯವಾಗಲಿದೆ. ಮತಾಂತರ ಕಾಯ್ದೆಯ ವಿರುದ್ಧ ಕ್ರೈಸ್ತರನ್ನು ಪ್ರಚೋದಿಸುವ ಮೂಲಕ ಕಾಂಗ್ರೆಸ್ ಒಂದು ಸಮುದಾಯವನ್ನೇ‌ ಸಮಾಜ ಓರೆಗಣ್ಣಿನಿಂದ ನೋಡುವಂತೆ ಮಾಡುತ್ತಿದೆ. ನಮ್ಮ ಸಂವಿಧಾನ ದೇಶದಲ್ಲಿ ಎಲ್ಲರಿಗೂ ಅವರಿಚ್ಛೆಯಂತೆ ಬದುಕುವ ಅವಕಾಶ ಕಲ್ಪಿಸಿದೆ. ಅದನ್ನು ದುರುಪಯೋಗಪಡಿಸಿಕೊಂಡು ಆಮಿಷ ಒಡ್ಡಿ ಬಲವಂತವಾಗಿ ಮುಗ್ಧರನ್ನು ಮತಾಂತರಿಸುವುದು ಅಕ್ಷಮ್ಯ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಸಂವಿಧಾನ ವಿರೋಧಿ ಕೃತ್ಯವನ್ನು ಸಂವಿಧಾನ ಬದ್ಧವಾಗಿ ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: New Year Guidelines: ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿದ ರಾಜ್ಯ ಸರ್ಕಾರ... ಏನುಂಟು? ಏನಿಲ್ಲ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News