ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇಂದು ಸಚಿವ ಸಂಪುಟದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ ಪಂಚ ಗ್ಯಾರಂಟಿಗಳ ನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.ಈ ಕುರಿತಾಗಿ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

Written by - Manjunath N | Last Updated : Jun 2, 2023, 06:54 PM IST
  • ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು
  • ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ಈ ಯೋಜನೆಯ ಉದ್ದೇಶ
  • ಲಿಂಗತ್ವ ಅಲ್ಪಸಂಖ್ಯಾತರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ
ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? title=
file photo

ಬೆಂಗಳೂರು: ಇಂದು ಸಚಿವ ಸಂಪುಟದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ ಪಂಚ ಗ್ಯಾರಂಟಿಗಳ ನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.ಈ ಕುರಿತಾಗಿ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಗೃಹ ಜ್ಯೋತಿ

Image

ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ ಗರಿಷ್ಠ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ. ಜನತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಪ್ರತಿ ಮನೆಗೆ ಉಚಿತ್ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದೆ.

ಯುವ ನಿಧಿ

Image

2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸಭೆಯು ನಿರ್ಧರಿಸಿದೆ. ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊಂದಿದ್ದು, ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ನಾಡಿನ ಯುವಶಕ್ತಿಗೆ ಆರ್ಥಿಕ ನೆರವು ನೀಡಿ ಅವರ ಭವಿಷ್ಯದ ಕನಸಿಗೆ ಬೆಂಬಲವಾಗಿ ನಿಲ್ಲಲು ಸರ್ಕಾರ ಬದ್ಧವಾಗಿದೆ.

ಶಕ್ತಿ

Image

ಶಾಲಾ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸಭೆ ನಿರ್ಧರಿಸಿದೆ. ಜೂನ್ 11 ರಂದು "ಶಕ್ತಿ" ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆಯಲಿದ್ದಾರೆ. ಪುರುಷ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗಾಗಿ ಮೀಸಲಿಡಲಾಗುತ್ತದೆ. ಶಿಕ್ಷಣ, ಉದ್ಯೋಗ ಹೀಗೆ ಜವಾಬ್ದಾರಿ ನಿರ್ವಹಣೆಗಾಗಿ ನಿತ್ಯ ಪ್ರಯಾಣ ಕೈಗೊಳ್ಳುವ ನಾಡಿನ ಮಹಿಳೆಯರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.

ಅನ್ನಭಾಗ್ಯ

Image

ಬಡತನ ರೇಖೆಗಿಂತ ಕೆಳಗಿನ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ ತಲಾ 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸಭೆಯು ನಿರ್ಧರಿಸಿದೆ. ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ಹಿಂದಿನ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ಸದ್ಯ 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು 10 ಕೆ.ಜಿ ಗೆ ಏರಿಸಲಾಗಿದೆ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಮೂಲಕ ನಾಡಿನ ಎಲ್ಲಾ ಬಡಕುಟುಂಬಗಳ ಹಸಿವನ್ನು ನೀಗಿಸಿ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ.

 

ಗೃಹಲಕ್ಷ್ಮಿ

Image

ಯಾವುದೇ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ ರೂ. 2,000 ಸಹಾಯಧನವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸಭೆಯು ಅನುಮೋದನೆ ನೀಡಿದೆ. ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅರ್ಜಿಗಳ ಪರಿಶೀಲನೆ ಹಾಗೂ ತಂತ್ರಾಂಶ ಅಭಿವೃದ್ಧಿಪಡಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು. ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಗೆ ಆರ್ಥಿಕ ನೆರವು ನೀಡಿ, ಅವರ ಕಷ್ಟಗಳಿಗೆ ಹೆಗಲಾಗಿ ನಿಲ್ಲಲು ಸರ್ಕಾರ ಬದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News