ಬೆಂಗಳೂರು: ಕೇವಲ ರಾಜಕೀಯ ಲಾಭದ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿಗೆ ತಂದಿಲ್ಲ, ಅದು ನಮ್ಮ ಬದ್ಧತೆ ಮತ್ತು ರಾಜ್ಯದ ಜನರ ಮೇಲಿನ ಕಾಳಜಿ. ಕೇಂದ್ರ ಸರ್ಕಾರದ ದುರಾಡಳಿತದಿಂದ ನೆಲ ಹಿಡಿದಿರುವ ಜನತೆಗೆ ನೆರವಾಗುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ."ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಟ್ಟಿಲ್ಲ’’ ಎನ್ನುವುದು ಅವರ ಇತ್ತೀಚಿನ ಸಂಶೋಧನೆ. ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟು? ಮತ್ಸರ? ಅದರ ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ನಿಮಗೆ ಇಷ್ಟೊಂದು ದ್ವೇಷ, ಅಸಹನೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನತೆ ಮಾತ್ರವಲ್ಲ ದೇಶದ ಜನತೆ ಕೂಡಾ ಸೋಲಿಸಿದ್ದು ನರೇಂದ್ರ ಮೋದಿ ಅವರ ಗ್ಯಾರಂಟಿಗಳನ್ನೇ ಹೊರತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನಲ್ಲ. ಅಶೋಕ್ ಅವರೇ, ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ. ಕಳೆದ ಲೋಕಸಭಾ ಚುನಾವಣೆಗಿಂತ ಶೇಕಡಾ 13 ರಷ್ಟು ಹೆಚ್ಚು ಮತಗಳನ್ನು ರಾಜ್ಯದ ಮತದಾರರು ಈ ಬಾರಿ ನಮಗೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮತಪ್ರಮಾಣದ ಅಂತರ ಕೇವಲ 0.63. ಈಗ ಹೇಳಿ ಗೆದ್ದವರು ಯಾರು? ಸೋತವರು ಯಾರು? ಎಂದು ಅವರು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿ; ಜುಲೈ 31ರವರೆಗೆ ಮಾತ್ರ ಓಟಿಎಸ್ ಗೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್
ನಮ್ಮ ಗೆಲುವಿನಿಂದ ನಾವು ತೃಪ್ತರಲ್ಲದೆ ಇದ್ದರೂ ರಾಜ್ಯದ ಜನ ಗೆಲ್ಲಿಸಿದ್ದು ನಮ್ಮನ್ನು, ಸೋಲಿಸಿದ್ದು ನಿಮ್ಮನ್ನು ಎನ್ನುವುದನ್ನು ಮರೆಯದಿರಿ. ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ, 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ನಾವು ಏರುವುದನ್ನೂ ನಿಮಗೆ ತಪ್ಪಿಸಲಾಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ, ಆ ಮೇಲೆ ಕಾಂಗ್ರೆಸ್ ಪಕ್ಷದ ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಿ ಎಂದು ಅವರು ಕೇಂದ್ರದ ಸರ್ಕಾರಿ ಯಂತ್ರದ ದುರುಪಯೋಗ, ಮೋದಿ ನಾಮ ಬಲ, ಅಪಾರವಾದ ಸಂಪನ್ಮೂಲಗಳ ಹೊರತಾಗಿಯೂ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯ ದಿವಾಳಿಯಾಗಬೇಕು ಎಂಬ ಆಸೆ ನಿಮಗಿದ್ದರೂ ಅದು ಈಡೇರುವುದಿಲ್ಲ. ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತದೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಸುಭದ್ರವಾಗಿರುತ್ತದೆ. ಸಾಲ ಮಾಡಿ ಸಂಬಳ ಕೊಡುವ ದುಸ್ಥಿತಿಗೆ ನಮ್ಮ ಸರ್ಕಾರ ತಲುಪಿಲ್ಲ. ನಿಮಗೆ ಬರುವ ಸಂಬಳದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಸಿಎಂ ಸ್ಪಷ್ಟ ಸೂಚನೆ
ದಲಿತರ ಬಗೆಗಿನ ನಿಮ್ಮ ಕಾಳಜಿ ಎಷ್ಟೊಂದು ಹುಸಿಯಾಗಿದೆ ಎನ್ನುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಸಚಿವ ಸಂಪುಟವೇ ಸಾಕ್ಷಿ. ಈ ಸಂಪುಟದಲ್ಲಿ ರಾಜ್ಯದಿಂದ ಒಬ್ಬನೇ ಒಬ್ಬ ದಲಿತ ಇಲ್ಲವೆ ಹಿಂದುಳಿದ ಸಮುದಾಯದ ನಾಯಕನಿಗೆ ಅವಕಾಶ ನೀಡಿಲ್ಲ. ದೇಶದಲ್ಲಿಯೇ ಮೊದಲ ಬಾರಿ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ನು ಜಾರಿಗೊಳಿಸಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸಂಪನ್ಮೂಲದ ಶೇಕಡಾ 25ರಷ್ಟನ್ನು ಮೀಸಲು ಇಟ್ಟವರು ನಾವು. ನಿಮಗೆ ದಮ್ಮು-ತಾಖತ್ ಇದ್ದರೆ ಈ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲು ಪ್ರಧಾನಿ ಮೋದಿಯವರಿಗೆ ತಿಳಿಸಿ. ಅದರ ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಅವರು ಆಗ್ರಹಿಸಿದ್ದಾರೆ.
ಡಿ.ಕೆ.ಸುರೇಶ್ ಅವರು ಸೋತಿದ್ದಾರೆ ಎನ್ನುವುದು ನಿಜ. ಆದರೆ ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಕಲ್ಬುರ್ಗಿ, ಮತ್ತು ರಾಯಚೂರುಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೂ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲಿಸಿದ್ದಾರೆ. ಹುಬ್ಬಳ್ಳಿಯ ಅಮಾಯಕ ಹೆಣ್ಣೊಬ್ಬಳ ಹತ್ಯೆಯನ್ನು ನಿಮ್ಮ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಕಾರಣಕ್ಕಾಗಿ ನಮಗೆ ಆ ಭಾಗದಲ್ಲಿ ಹಿನ್ನಡೆಯಾಯಿತು. ಇಲ್ಲದೆ ಇದ್ದರೆ ನಿಮ್ಮ ಪಕ್ಷ ಒಂದಂಕಿಗೆ ಇಳಿಯುತ್ತಿತ್ತು. ನಿಮ್ಮ ದೆಹಲಿ ನಾಯಕರ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.