ಬೆಂಗಳೂರು : ಮಠಗಳು ಮತ್ತು ಅವುಗಳ ನಿಯಂತ್ರದಲ್ಲಿರುವ ದೇವಾಲಯಗಳನ್ನು ಮುಜರಾಯಿ ಇಲಾಖೆ ನಿಯಂತ್ರಣಕ್ಕೆ ಒಳಪಡಿಸುವ ಯಾವುದೇ ಆಲೋಚನೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪ್ರಶ್ನೆಗಳ ಮಳೆಗೆ ಉತ್ತರಿಸಿದ ಸಿಎಂ "ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಜನರ ಅಭಿಪ್ರಾಯಗಳನ್ನು ಕೇಳಿದ್ದೆವು. ಈಗ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇವೆ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ" ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, "ಬೇರೆಯವರ ಮಠ ದೇಗುಲಗಳನ್ನು ತೆಗೆದುಕೊಂಡು ನಾವೇನು ಮಾಡೋಣ, ಮಠಗಳ ಉಸಾಬರಿ ನಮಗೆ ಬೇಡ" ಎಂದು ಹೇಳಿದರು.
ಈ ಹಿಂದೆ ರಾಜ್ಯದ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಾಲಯಗಳ ಮೇಲೆ ಹತೋಟಿ ಸಾಧಿಸಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಧಾರ್ಮಿಕ ವಲಯದಲ್ಲಿ ಭಾರಿ ವಿವಾದ ಹುಟ್ಟುಹಾಕಿತ್ತಲ್ಲದೆ, ಮಠಾಧೀಶರು ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ತನಗೆ ಮಠಗಳನ್ನು ಹತೋಟಿಗೆ ಪಡೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.